PACCHENAGARI - 1 books and stories free download online pdf in Kannada

ಪಚ್ಚೇನಗರಿ - 1

ಸುಂದರಕಾಂಡದ ಕಥನಾಗರೀಯೋ!
ದ್ವಾಪರದ ಕೃಷ್ಣಾ ಸುಂದರಿಯೋ!
ನೀ ಬಾಳ ಬೆಳಕೋ! ತಂಗಾಳಿಯೊ !

ನಾ ಕಾಣೆ ನಿನ್ನ ಒಡಲಾಳವನ್ನ
ನಿನ್ನ ಸನಿಹ ಬಿಡಲಾರೆ ಚಿನ್ನ

ಇರು ನೀನು ಜೊತೆಯಲ್ಲೇ
ಬಿಡಲಾರೆ ನಾ ನಲ್ಲೆ


ಗೀತಾ ಹಾಡಲು ಶುರು ಮಾಡಿದಳು, ಬಸ್ಸಿನಲ್ಲಿದ್ದ ತನ್ನ ಗೆಳತಿಯರನ್ನು ರಂಜಿಸುತ್ತಾ, ನಸುನಕ್ಕು ತಾನು ಗಂಡು ಈ ತುಂತುರು ಮಳೆ ನನ್ನ ಪ್ರೇಯಸಿ ಎಂಬ ಭಾವವನ್ನು ಸೃಷ್ಟಿಸಿ ಹಾಡುತ್ತಿದ್ದಳು.

ಗೆಳತಿಯರೆಲ್ಲ ಗೀತಳ ಹಾಡು ಹುಡುಗರು ಹಾಡುವ ಹಾಗೆ ಹಾಡುತ್ತಿದ್ದೀಯ , ಏನಾಯಿತು ಈ ದಿನ ಗೀತಾ ಎಂದು ನಗಲು ಶುರುಮಾಡಿದರು.

ಇದ್ದಕ್ಕಿದ್ದಂತೆ ತಂಪಾಗಿ ಬೀಸುತ್ತಿದ್ದ ಗಾಳಿ ಯಾಕೋ ಗೀತಾ ಬಸ್ ನಿಂದ ಇಳಿಯುತ್ತಿದ್ದಂತೆ ತನ್ನ ಭಾವವನ್ನು ಬದಲಾಯಿಸಿತು.

ಮುಸ್ಸಂಜೆ 4 ಗಂಟೆ ಸಮಯ, ಗೀತಾ ಕಾಲೇಜು ಮುಗಿಸಿ ಫ್ರೆಂಡ್ಸ್ ಜೊತೆ ಹರಟೆ ಹೊಡೆಯುತ್ತ ಬುಸ್ಸಿನಿಂದಿಳಿದು ಮನೆಗೆ ಹೊರಟಿರುವಾಗಲೇ ಬೀಸಿತು ಬಿರುಗಾಳಿ , ಬಿರುಗಾಳಿಯ ಗೆಳತಿಯಂತೆ ಶುರುವಾಯಿತು ಮಳೆ. ಪಚ್ಚೇನಗರದಿಂದ ರಾಗಿಹಳ್ಳಿಗೆ ಒಂದೇ ಸೇತುವೆ ಹಾಗು ಅದೊಂದೇ ದಾರಿ.

ಮಳೆಗೆ ಗೀತಳ ಮೇಲೆ ಏನು ಮುನಿಸೋ, ಸಣ್ಣದಾಗಿ ಬಂದು ದೊಡ್ಡದಾಗಿ ನರ್ತಿಸಲು ಶುರುಮಾಡಿತು. ಆ ಮಳೆ ಗೀತಳ ಕೆಂದುಟಿಯ ಮೇಲೆ ಬಿದ್ದು ನಿಧಾನವಾಗಿ ಮಾಯವಾಗುತ್ತಲಿತ್ತು. ಆಕೆ ಹಾಕಿದ್ದ ಗುಲಾಬಿ ಬಣ್ಣದ ದುಪ್ಪಟ್ಟದಿಂದ ತನ್ನ ಮುಖವನ್ನು ಒರೆಸುತ್ತಾ ಮರದಡಿಯಲ್ಲಿ ನಿಂತಳು ಅದೇಕೋ ಇಂದು ಸುತ್ತ ಮುತ್ತ ಜನರಿಲ್ಲದ ಕಾರಣ ಆಕೆಗೆ ಅದೇನೋ ಒಂದು ಆತಂಕ ಮನದಲ್ಲಿ ಒಂದು ಸಣ್ಣ ಬೀಜವಾಗಿ ಮೊಳಕೆ ಹೊಡೆಯಿತು.

ಸುತ್ತ ನೋಡಿದಳು ಆ ನಗುವ ಮುಖದಲ್ಲಿ ಸಣ್ಣ ಆತಂಕ ಸೇರಿ ಮುಗ್ಧತೆ ತುಂಬಿ ಅರಳಿರುವ ಹೂವಾಗಿ ಕಾಣತೊಡಗಿದಳು ಗೀತಾ.
ಏನಿದು ಶಬ್ದ!

ಧಡ್, ಧಡ್, ಧಡ್ ,...ಗೀತಾ ಗಮನಿಸಿದಳು ಆ ನಿಶಬ್ದದ ವಾತಾವರಣ ಆಕೆಯಲ್ಲಿ ಇನ್ನಷ್ಟು ಆತಂಕ ಹೆಚ್ಚಿಸಿತು.
ಸುತ್ತಲೂ ನೋಡಿದಳು.

ಯಾರು ಇಲ್ಲ. ಸ್ವಲ್ಪ ಮುಂದೆ ಬಂದು ಇನ್ನು ನಿಲ್ಲುವುದು ಬೇಡ ಅನಿಸಿತೋ ಏನೋ ನಿಧಾನವಾಗಿ ಚಲಿಸತೊಡಗಿದಳು.
ಮತ್ತದೇ ಶಬ್ದ ಧಡ್ ! ಧಡ್ ! ಧಡ್ !

ಎದೆಬಡಿತ ಜೋರಾಯಿತು !

ಗೀತಾ ಸ್ತಬ್ದಳಾಗಿ ನಿಂತಳು. ಸುತ್ತಲೂ ನಿಧಾನವಾಗಿ ಭಯದಿಂದ ತಿರುಗಿ ನೋಡಿದಳು !

ಅಲ್ಲಿ ಯಾರು ಇಲ್ಲ. ಮತ್ತೆ ನಿಟ್ಟುಸಿರು ಬಿಡುತ್ತ ನಿಧಾನವಾಗಿ ಹೆಜ್ಜೆ ಇಡಲು ಶುರು ಮಾಡಿದಳು.

ಮತ್ತದೇ ಶಬ್ದ, ಧಡ್ ! ಧಡ್ !ಧಡ್ ! ಏನದು.

ಮತ್ತೆ ನಿಂತಳು ಗೀತಾ . ಆಕೆಗೆ ಒಂದು ಗಮನಕ್ಕೆ ಬಂತು ಅದು ಯಾರೊದೊ ಬೂಟಿನ ಶಬ್ದ . ಒಮ್ಮೆಲೇ ತಿರುಗಿದಳು ಯಾರಿಲ್ಲ .

ನಿಧಾನದ ಹೆಜ್ಜೆಯಿಂದ ಸ್ವಲ್ಪ ಜೋರಾಗಿ ನಡೆಯಲು ಶುರು ಮಾಡಿದಳು ತಿರುಗಿ ನೋಡಲು ಧೈರ್ಯವಿಲ್ಲ .

ಧಡ್ !ಧಡ್ ! ಶಬ್ದ ಜೋರಾಯಿತು ಹಿಂದೆಯೇ ಯಾರೋ ಬರುತ್ತಿರುವುದು ಗೀತಳ ಗಮನಕ್ಕೆ ಬಂತು. ಸೇತುವೆಯ ಕಾಲು ಭಾಗದಷ್ಟು ಮುಂದೆ ಬಂದಿದ್ದ ಗೀತಾ ತಿರುಗಿ ನೋಡಲಿಲ್ಲ. ಒಮ್ಮೆಲೇ ತನ್ನ ನಡುಗೆ ಹೆಚ್ಚಿಸಿ ಓಡಲು ಶುರು ಮಾಡಿದಳು.

ಹಿಂದೆಯೇ ಆ ಬೂಟಿನ ಶಬ್ದ ಓಡಲು ಶುರುಮಾಡಿತು . ಶಬ್ದ ಹೆಚ್ಚಾದಂತೆ ಗೀತಳ ಆತಂಕ ಹೆಚ್ಚಾಯಿತು . ಇನ್ನು ಜೋರಾಗಿ ಓಡಲು ಶುರು ಮಾಡಿದಳು . ಆಕೆಯ ಮುಗ್ಧತೆ ತುಂಬಿದ ಮುಖ ಪೂರ್ಣ ಭಯದಿಂದ ಇನ್ನಷ್ಟು ಮುಗ್ಧತೆ ಹೊಂದಿತು .

ಜೋರಾಗಿ ಓಡಲು ಶುರು ಮಡಿದ ಗೀತಾ ಹಿಂದೆ ತಿರುಗಿ ನೋಡಲೇ ಇಲ್ಲ , ಒಂದೇ ಸಮನೆ ಓಡುತ್ತ್ತಾ ತನ್ನನ್ನು ಕೂಡ ಮರೆತಳು .

ಗೀತಳ ಮನಸು ಹೇಳುತ್ತಿರುವುದೊಂದೇ ಓಡು ಗೀತಾ ಓಡು !

ಓಡು ಗೀತಾ ! ಓಡು !

ಧಡ್ ! ಧಡ್ !

ಗೀತಾ ಓಡು ! ಗೀತಾ ಓಡು !

ಸತತವಾಗಿ ಓಡಿದ ಗೀತಾ ಸೇತುವೆಯ ಕೊನೆಯ ಭಾಗವನ್ನು ದಾಟಿದಳು , ಒಮ್ಮೆಲೇ ಸೇತುವೆಯಿಂದ ನೆಲದ ಮೇಲೆ ಕಾಲಿಟ್ಟ ತಕ್ಷಣವೇ ಕುಸಿದು ನೆಲಕ್ಕೆ ಬಿದ್ದಳು .


ಧಡ್ ! ಧಡ್ !

ಅದೇ ಶಬ್ದ .

ಗೀತಳ ಮುಖ ನೆಲವನ್ನು ತಾಗಿತ್ತು, ಮುಖವನ್ನು ಎತ್ತುವ ಪ್ರಯತ್ನ ಮಾಡಲಿಲ್ಲ .

ನಿಧಾನವಾಗಿ ತನ್ನ ಕಣ್ ತೆರೆದು ಒಂದಿಂಚು ನೆಲವನ್ನು ನೋಡಿದಳು . ಯಾರು ಇಲ್ಲ .

ಸ್ವಲ್ಪ ಕಣ್ಣೆತ್ತಿ ನೋಡುತ್ತಲೇ ಬೂಟು ಕಾಲುಗಳು ಪ್ರತ್ಯಕ್ಷವಾಗಿದ್ದವು.

ಗೀತಳ ಹೃದಯವೇ ಒಡೆದಂತಾಯಿತು . ಮೇಲೆ ನೋಡುವ ಪ್ರಯತ್ನ ಕೂಡ ಮಾಡಲಿಲ್ಲ .

ಒಂದೇ ಸಮನೆ ತನ್ನ ಇಷ್ಟದೈವ ಗಣೇಶನನ್ನು ನೆನೆಯಲು ಶುರುಮಾಡಿದಳು .

ಗಣೇಶ ! ಗಣೇಶ ! ಗಣೇಶ !

ಒಂದೆರಡು ಕ್ಷಣಗಳು ಹಾಗೆಯೇ ನಿಶಬ್ದ !

ನಂತರ ನಿಧಾನವಾಗಿ ತನ್ನ ತಲೆ ಮೇಲೆತ್ತಲು ಪ್ರಯತ್ನಿಸಿದಳು ಬೂಟುಗಳನ್ನು ನೋಡಿದ ತಕ್ಷಣ ಹೆದರಿ ತಲೆಯನ್ನು ನೆಲಕ್ಕೆ ತಾಗಿಸಿದಳು .

ಮತ್ತದೇ ನಿಶಬ್ದ !

ಒಂದು ನಿಮಿಷ ಜೋರಾಗಿ ಉಸಿರೆಳೆದು ಗಣೇಶನನ್ನು ಸ್ಮರಿಸುತ್ತ ನಿಧಾನವಾಗಿ ತನ್ನ ತಲೆ ಎತ್ತಿದಳು .

ಗುಲಾಬಿ !!!!

ಕೆಂಪು ಗುಲಾಬಿ ಕಂಡಿತು !

ಹೌದು ! ಕೆಂಪು ಗುಲಾಬಿಯೊಂದನ್ನು ಹಿಡಿದು ಒಂದು ಕೈ ಚಾಚಿತ್ತು .

ತನ್ನ ಮುದ್ದಾದ ಮುಖವನ್ನು ನಿಧಾನವಾಗಿ ಪೂರ್ಣಮೇಲೆತ್ತಿದಳು .

ಹೌದು ! ಈಗ ಮಳೆಯೂ ತನ್ನ ಪ್ರಳಯನೃತ್ಯವನ್ನು ಮೋಹಕ ನೃತ್ಯವಾಗಿ ಬದಲಿಸಿತ್ತು .

ಆ ಹುಡುಗ ಕೆಂಪು ಗುಲಾಬಿ ಹಿಡಿದು ಗೀತಳ ಹಿಂದೆ ಓಡಿ ಬಂದಿದ್ದ .

ಮುಂದೆ,...