Shyamani got a brunette books and stories free download online pdf in Kannada

ಶ್ಯಾಮನಿಗೆ ಸಿಕ್ಕಳು ಶ್ಯಾಮಲೆ

ಶ್ಯಾಮ ನಿಗೆ ಸಿಕ್ಕಳು ಶ್ಯಾಮಲೆ

(ಆಕಸ್ಮಿಕ ಪ್ರೇಮ ಕಥೆ)

ಲೇಖಕರು ವಾಮನಾಚಾರ್ಯ

ಬೆಳಗಿನ ಹತ್ತು ಗಂಟೆ ಸಮಯ ಬೆಟ್ಟದೂರು ಗ್ರಾಮದಲ್ಲಿ ಬೇಸಿಗೆ ಬಿಸಿಲು ಪ್ರಖರ ವಾಗಿದೆ. ಇಲ್ಲಿಂದ ರಾಘವಪುರ್ ಹೋಗುವ ಮಾರ್ಗ

ದಲ್ಲಿ ರಸ್ತೆಯ ಮೇಲೆ ಓರ್ವ ಯುವತಿ ಏಳು ವರ್ಷದ ಬಾಲಕನನ್ನು ಎತ್ತಿಕೊಂಡು ಹೋಗುವ ದೃಶ್ಯ ನೋಡಿದವರಿಗೆ ಕರುಣೆ ಬರು ವದು ಸಹಜ. ಹಿಂದೆ ಬರುತ್ತಿರುವ ಜೀಪ್ ನಿಲ್ಲಿಸಿದ ಯುವಕ ಆಕೆಗೆ,

“ಬಾಲಕನನ್ನು ಏಕೆ ಎತ್ತಿಕೊಂಡು ಹೋಗುತ್ತಿ? ಏನಾಗಿದೆ?” ಎಂದು ಕೇಳಿದ.

ಆಕೆ ಬಾಲಕನನ್ನು ಕೆಳಗೆ ಇಳಿಸಿ,

"ರಾಘವಪುರ್ ಕ್ಕೆ ಹೋಗುವ ಬೆಳಗ್ಗೆ ಬಿಡುವ ಬಸ್ ಕೆಟ್ಟು ನಿಂತಿದೆ. ನಾಲ್ಕು ಕಿಲೋಮೀಟರ್ ನಡೆದು ಕೊಂಡು ಹೋಗುವ ಅನಿವಾರ್ಯತೆ ಬಂದಿದೆ.ದಾರಿಯಲ್ಲಿ ನಮ್ಮ ಗ್ರಾಮದ ಒಬ್ಬ ಬಾಲಕ ಕಂಡ. ಜೊತೆಗೆ ಹೋಗುವಾಗ ಬಿಸಿಲಿನ ತಾಪ ತಾಳ ಲಾರದೆ ಆ ಬಾಲಕ ನೆಲದ ಮೇಲೆ ಕುಸಿದು ಬಿದ್ದು ಎಚ್ಚರ ತಪ್ಪಿತು. ನನ್ನಲ್ಲಿ ಇರುವ ಬಾಟಲಿ ನೀರಿನಿಂದ ಉಪಶಮನ ಮಾಡುವ ಪ್ರಯತ್ನ ಮಾಡಿದೆ. ಅವನು ಕಣ್ಣು ತೆಗೆಯುತ್ತ ಇಲ್ಲ. ಸಮೀಪದಲ್ಲಿ ಗಿಡ ಮರಗಳು, ಬಾವಿ ಏನೂ ಇಲ್ಲ. ದಾರಿ ಯಲ್ಲಿ ಒಬ್ಬರೂ ಇಲ್ಲ. ನನಗೆ ತುಂಬಾ ಗಾಬರಿ ಆಗಿದೆ," ಎಂದಳು.

"ಮ್ಯಾಡಮ್, ಎಲ್ಲರೂ ಜೀಪ್ ನಲ್ಲಿ ಕುಳಿತು ಕೊಳ್ಳಿ" ಎಂದ.

ಎಚ್ಚರ ತಪ್ಪಿದ ಬಾಲಕನನ್ನು ವಾಹನದಲ್ಲಿ

ಕೂಡಿಸಲು ಯುವಕನೇ ಅ ಬಾಲಕ ನನ್ನು ಎತ್ತಿ ಜೀಪ್ ನಲ್ಲಿ ಕೂಡಿಸಿದ.ಎಲ್ಲರೂ ಕುಳಿತ ಮೇಲೆ ಮೊದಲು ಆಕೆಗೆ ಕುಡಿಯಲು ನೀರು, ಬಿಸ್ಕತ್ತು ಹಾಗೂ ಫ್ಲಾಸ್ಕ ನಲ್ಲಿ ಇರುವ ಕಾಫಿ ಕೊಟ್ಟ. ಅವುಗಳನ್ನು ತೆಗೆದುಕೊಂಡಮೇಲೆ ಆಕೆ,

“ಸರ್, ನಿಮಗೆ ತುಂಬಾ ಧನ್ಯವಾದಗಳು,” ಎಂದಳು.

ಆತ ಜೀಪ್ ಸ್ಟಾರ್ಟ್ ಮಾಡಿದ.

ಮ್ಯಾಡಮ್, ರಾಘವಪುರ್ ದಲ್ಲಿ ಏನು ಮಾಡುತ್ತೀರಾ?”

“ಸರ್, ನಾನು ನೀಲಾ0ಬಿಕಾ ವಿವಿದೋದ್ದೇಶ ಪ್ರೌಢ ಶಾಲೆಯಲ್ಲಿ ಕ್ಲರ್ಕ್. ಈ ಬಾಲಕ ನಮ್ಮ ಗ್ರಾಮದವನು. ದಿನಾಲು ಶಾಲೆಗೆ ಹೋಗಲು ರಾಘವಪುರ್ ಕ್ಕೆ ಹೋಗುವನು.” ಹತ್ತು ನಿಮಿಷದಲ್ಲಿ ರಾಘವಪುರ್ ದ ಕೃಷ್ಣ ರುಕ್ಮಿಣಿ ಮೆಮೋರಿಯಲ್ ಆಸ್ಪತ್ರೆ ಬಂದಿತು. ಒಳಗೆ ಕರೆದುಕೊಂಡು ಹೋಗಿ ತೀವ್ರ ಬಾಲಕನ ಚಿಕಿತ್ಸೆ ಮಾಡುವಂತೆ ಡಾಕ್ಟರ್ ಗೆ ಹೇಳಿ ಹೋದ.

ಸಹಾಯ ಮಾಡಿದ ಆ ಯುವಕ ಯಾರು?

ಅರ್ಧ ಗಂಟೆಯಲ್ಲಿ ಬಾಲಕ ಚೇತರಸಿ ಕೊಂಡ. ಯುವಕನಿಗೆ ಧನ್ಯವಾದ ಹೇಳಲು ಎಲ್ಲಾ ಕಡೆ ನೋಡಿದ ಯುವತಿಗೆ ಆತ ಕಾಣಲಿಲ್ಲ. ಆ ಯುವತಿಗೆ ಇನ್ನೊಂದು ಆಶ್ಚರ್ಯ. ಡಾಕ್ಟರ್ ಗೆ ಫೀಸ್ ಕೇಳಲು ಹೋದಳು.

“ಈಗ ತಾನೇ ಬಂದ ಯುವಕ ನಿಮ್ಮ ಫೀಸ್ ಕೊಟ್ಟು ಹೋದ,”ಎಂದರು.

ಅದಕ್ಕೆ ಆ ಯುವತಿ,

"ಡಾಕ್ಟರ್ ಸಾಹೇಬರೇ, ನಮಗೆ ಸಹಾಯ ಮಾಡಿದ ಯುವಕ ಯಾರು?"

“ಮೊದಲು ನೀನು ಯಾರು ಹೇಳು?”

ಆಕೆ ತನ್ನ ಬಗ್ಗೆ ಹೇಳಿದಳು.

"ಆ ಯುವಕ ರಾಘವಪುರ ನಗರದ ಕಟ್ಟಡ ಸಾಮಗ್ರಿಗಳ ಸಗಟು ವ್ಯಾಪಾರಿ ಶ್ಯಾಮ ಪೋದ್ದಾರ್. ಈ ಆಸ್ಪತ್ರೆಗೆ ಅವನೇ ಯಜಮಾನ. ನಾನು ಅವನ ಅಣ್ಣ ಹೃದಯ ರೋಗ ತಜ್ಞ ಡಾ. ರಾಧಾ ಕೃಷ್ಣ ಪೋದ್ದಾರ್. ಅವನು ಬಡವರು, ದೀನ ದಲಿತರು ಕಷ್ಟದಲ್ಲಿ ಇರುವವರಿಗೆ ಸಹಾಯ ಮಾಡುವನು.”

“ಸರ್, ನಾನೊಬ್ಬ ಅನಾಥೆ. ಇಲ್ಲಿ ಬಾಡಿಗೆ ಮನೆ ಹುಡುಕುತ್ತ ಇದ್ದೇನೆ. ನಮ್ಮ ಗ್ರಾಮದಿಂದ ಬಹಳ ಮಕ್ಕಳು ಇಲ್ಲಿಗೆ ದಿನಾಲು ಶಾಲೆಗೆ ಬರುವರು. ಸಾಯಂಕಾಲ ವಾಪಸ್ ಹಳ್ಳಿಗೆ ಹೋಗುವರು. ಅಲ್ಲಿಂದ ಒಂದೇ ಒಂದು ಬಸ್ ಸೌಕರ್ಯ. ಬಸ್ ತಪ್ಪಿದರೆ ನಾಲ್ಕು ಕಿಲೋ ಮೀಟರ್ ನಡೆದು ಕೊಂಡು ಬರಬೇಕು. ರಸ್ತೆಯ ಗತಿ ಅಧೋಗತಿ. ಮಳೆ ಗಾಲದಲ್ಲಿ ಆಗುವ ಪರದಾಟ ಯಾರೂ ಕೇಳುವವರು ಇಲ್ಲ. ನಿಮ್ಮ ತಮ್ಮನನ್ನು ಭೇಟಿ ಆಗಬೇಕು. ಅವರು ಎಲ್ಲಿ ಸಿಗುವರು?”

ಅವಳ ಪರಿಸ್ಥಿತಿ ಅರಿತು ಡಾಕ್ಟರ್ ಹೇಳಿದರು,

"ಈ ಸಮಯದಲ್ಲಿ ಅವನು ನೀನು ಕೆಲಸ ಮಾಡುವ ಶಾಲೆ ಎದುರುಗಡೆ ಇರುವ 'ಭುವನೇಶ್ವರಿ ಎಂಟರ್ ಪ್ರೈಸೆಸ್' ನಲ್ಲಿ ಸಿಗುವನು."

ಬಾಲಕ ನಿಗೆ ಗೆ ಕ್ಲಾಸ್ ಗೆ ಕಳಿಸಿ ಶಾಲೆಯ ಮುಖ್ಯ್ಯೊಪಾಧ್ಯಾಯ ಪುರುಷೋತ್ತಮ್ ದಾಸ್ ಅವರಿಗೆ ಅನುಮತಿ ಕೇಳಿದಳು.

“ಈಗಾಗಲೇ ತಡವಾಗಿ ಬಂದು ಹೊರಗೆ ಹೋಗಲು ಅನುಮತಿ ಕೇಳುತ್ತೀಯಾ. ತಡ ವಾಗಿ ಬಂದಿರುವದಕ್ಕೆ ಕಾರಣ ಹೇಳು. ಸರಿಯಾದ ಉತ್ತರ ಕೊಡದಿದ್ದರೆ ನಿನಗೆ ಕೆಲಸದಿಂದ ತೆಗೆದು ಹಾಕಲು ಹೇಳುತ್ತೇನೆ,” ಎಂದರು ಸಿಟ್ಟಿನಿಂದ.

ಸುವರ್ಣ ಆಗಿರುವದನ್ನು ಹೇಳಿದಳು.

ದಾಸ್ ಅವರಿಗೆ ಕಾರಣ ಗೊತ್ತಾಗಿ,

“ಆಯಿತಮ್ಮ ಹೋಗಿ ಬಾ. ಆತ ನಮ್ಮ ಸ್ಕೂಲ್ ಅಭಿವೃದ್ಧಿ ಸಮಿತಿಯ ಅಧ್ಯಕ್ಷ. ನಿನಗೆ ಒಳ್ಳೆಯದಾಗಲಿ,” ಎಂದರು..

ನಂತರ ಭುವನೇಶ್ವರಿ ಎಂಟರ್ಪ್ರೈಸಸ್ ಅಂಗಡಿ ಒಳಗೆ ಹೋದ ಮೇಲೆ ಶ್ಯಾಮ್ ಪೋದ್ದಾರ್ ಎಂದು ಗುರುತು ಹಿಡಿದಳು. ಗ್ರಾಹಕರನ್ನು ನೋಡಲು ಬೇರೆ ಅವರಿಗೆ ಹೇಳಿ ಆಕೆಯನ್ನು ಒಳಗೆ ಕರೆದರು.

"ಹೇಳಿ, ಸುವರ್ಣ ಅವರೇ.ಅಣ್ಣ ಈಗಾಗಲೇ ನೀವು ಬರುವದನ್ನು ತಿಳಿಸಿದ."

"ಸರ್, ನಿಮಗೆ ಧನ್ಯವಾದ ಹೇಳಲು ಬಂದೆ. ನಿಮ್ಮ ಹಾಗೆ ಕರುಣೆ, ಅನುಕಂಪ ಹಾಗೂ ಪರೋಪಕಾರ ಇರುವ ಜನ ತುಂಬಾ ವಿರಳ. ಒಂದುವೇಳೆ ನೀವು ಬಾಲಕನಿಗೆ ಸಮಯಕ್ಕೆ ಸರಿಯಾಗಿ ಸಹಾಯ ಮಾಡದೇ ಇದ್ದರೇ ಅವನು ಬದುಕಿ ಉಳಿಯುವದು ಕಷ್ಟ ವಾಗುತ್ತಿತ್ತು. ದೇವರ ಹಾಗೆ ಬಂದು ಬಾಲಕನ ಜೀವ ಉಳಿಸಿದ ಪುಣ್ಯಾತ್ಮ. ನಿಮ್ಮ ಉಪಕಾರ ಎಷ್ಟು ಕೊಂಡಾಡಿದರೂ ಅದು ಕಡಿಮೆ. ನಿಮ್ಮ ಬಗ್ಗೆ ನಿಮ್ಮ ಅಣ್ಣ ಹಾಗೂ ನನ್ನ ಬಾಸ್ ಪುರುಷೋತ್ತಮ್ ದಾಸ್ ಅವರ ಮೂಲಕ ತಿಳಿದುಕೊಂಡೆ. ನಿಮ್ಮ ವ್ಯಾಪಾರ ವ್ಯವಹಾರ ಅಭಿವೃದ್ಧಿ ಆಗಲಿ,”ಎಂದು ಹೇಳಿ ಹೋಗಿಯೇ ಬಿಟ್ಟಳು.

ಆಕೆಯ ನಿರರ್ಗಳ ವಾಗಿ ಮಾತನಾಡುವ ಶೈಲಿ, ರೂಪ ಲಾವಣ್ಯ ಹಾಗೂ ಗಾಂಭೀರ್ಯ ನೋಡಿ ಶ್ಯಾಮ್ ತುಂಬಾ ಪ್ರಭಾವಿತ ನಾದ. ಮೊದಲು ಸಲ ಆಕೆಯನ್ನು ನೋಡಿದಾಗ ಆಕೆ ಮೇಲೆ ಪ್ರೀತಿ ಅಂಕುರ ವಾಗಿತ್ತು. ಸುವರ್ಣ ತನ್ನ ಬಾಳ ಸಂಗಾತಿ ಆಗಲು ಯೋಗ್ಯಳು ಎಂದು ಅಂದು ಕೊಂಡ. ಈಗಾಗಲೇ ಶ್ಯಾಮ್ ನಿಗೆ ವರ ಮಾಲೆ ಹಾಕಲು ಕನ್ಯಾಮಣಿಗಳು ಸಾಲು ಸಾಲಾಗಿ ನಿಂತಿರುವರು. ಅವರೆಲ್ಲರನ್ನು ಬಿಟ್ಟು ಅಪರಿಚಿತ ಅನಾಥೆ ಸುವರ್ಣಾ ಗೆ ಏಕೆ ಆಯ್ಕೆ ಮಾಡಿದ?

ಸುವರ್ಣ ಒಪ್ಪಿಗೆಯೂ ಅವಶ್ಯ ಎಂದು ಅಂದುಕೊಂಡು ಅದಕ್ಕಾಗಿ ಒಂದು ಐಡಿಯಾ ಮಾಡಿದ.ಆಕೆಯನ್ನು ಭೇಟಿ ಆಗಿ ತನ್ನ ಇಂಗಿತವನ್ನು ವ್ಯಕ್ತ ಪಡಿಸುವ ಯೋಚನೆ ಮಾಡಿದ.

ಹದಿನೈದು ದಿವಸ ಕಳೆಯಿತು.

ಒಂದು ದಿವಸ ಸಾಯಂಕಾಲ ಐದು ಗಂಟೆಗೆ ರಾಘವಪುರ್ ಬಸ್ ಸ್ಟ್ಯಾಂಡ್ ನಲ್ಲಿ ಸುವರ್ಣ ಬೆಂಚ್ ಮೇಲೆ ಕುಳಿತಿರುವದನ್ನು ಶ್ಯಾಮ್ ನೋಡಿದ. ಈ ಅವಕಾಶ ಬಿಡಬಾರದು ಎಂದು ಅಲ್ಲಿಗೆಹೋದ

"ಸುವರ್ಣಾ ಅವರೇ ಹೇಗಿದ್ದೀರಾ?”

ಯಾರು ಎಂದು ನೋಡಿದ ಸುವರ್ಣಾ ಗೆ ಆಶ್ಚರ್ಯ.

“ಸರ್, ನಾನು ಚೆನ್ನಾಗಿದ್ದೇನೆ.”

ನಿಮ್ಮಂಥ ಬುದ್ಧಿವಂತರು ನಮ್ಮ ವ್ಯವಹಾರದಲ್ಲಿ ಬೇಕಾಗಿದೆ. ನೀವು ಸಮ್ಮತಿ ಕೊಟ್ಟರೆ ನಿಮಗೆ ಒಂದು ಜವಾಬ್ದಾರಿ ಕೆಲಸ ವಹಿಸುತ್ತೇನೆ. ಉತ್ತಮ ಸಂಬಳ, ಇರಲು ಬಾಡಿಗೆ ಇಲ್ಲದ ಮನೆ ಕೊಡುತ್ತೇನೆ."

ಇದನ್ನು ಕೇಳಿದ ಸುವರ್ಣ ಗೆ ಖುಷಿ ಏನೋ ಆಯಿತು. ಸಧ್ಯದ ಕೆಲಸ ತಾತ್ಕಾಲಿಕ ಇದ್ದು ಯಾವಾಗ ಕೆಲಸದಿಂದ ತೆಗೆಯುವರೋ ಗೊತ್ತಿಲ್ಲ. ಒಬ್ಬ ಅಪರಿಚಿತ ಹುಡುಗಿಗೆ ಕೇಳದೇ ಇಷ್ಟೆಲ್ಲಾ ಕೊಡುವದು ಅನುಮಾನಕ್ಕೆ ಆಸ್ಪದ ಎನ್ನುವ ಅನುಮಾನ ಕೂಡಾ ಆಕೆಗೆ ಬಂದಿತು.

"ಸರ್, ವಿಚಾರ ಮಾಡಲು ನನಗೆ ಒಂದು ವಾರ ಸಮಯ ಕೊಡಿ."

ಅದಕ್ಕೆ ಶ್ಯಾಮ್ ಆಯಿತು ಎಂದ.

ಇದರ ಬಗ್ಗೆ ಯಾರ ಜೊತೆಗೆ ಮಾತನಾಡಿದರೆ ಸರಿಯಾದ ಸಲಹೆ ಕೊಡುವರು? ಎನ್ನುವದು ಆಕೆಗೆ ಚಿಂತೆ ಆಯಿತು. ಹಿರಿಯರಾದ ಹೆಡ್ ಮಾಸ್ತರ ಪುರುಷೋತ್ತಮ್ ದಾಸ್ ಅವರ ಸಲಹೆ ಕೇಳಲು ಹೋದಳು. ಶಾಲೆಯಲ್ಲಿ ಅವರು ತಮ್ಮ ಕೋಣೆಯಲ್ಲಿ ಒಬ್ಬರೇ ಇದ್ದಾಗ ಒಳಗೆ ಹೋದಳು.

ಆಕೆಯನ್ನು ನೋಡಿ ಅವರು,

"ಸುವರ್ಣಾ, ಕುಳಿತುಕೊ,” ಎಂದರು.

"ಆಯಿತು ಸರ್ ಆದರೆ ಒಂದು ಸಮಸ್ಯೆ."

"ಅದೇನಮ್ಮ ಹೇಳು."

ಆಗಿರುವದೆಲ್ಲ ಹೇಳಿದಳು.

ಅದಕ್ಕೆ ಹೆಡ್ ಮಾಸ್ಟರ್,

"ಸುವರ್ಣಾ ಈ ಬಂದ ಸುವರ್ಣಾವಕಾಶ ಬಿಡ ಬೇಡ. ಶ್ಯಾಮ್ ನನ್ನ ವಿದ್ಯಾರ್ಥಿ. ಚಿಕ್ಕವನು ಇದ್ದಾಗಿ ನಿಂದ ಅವನು ತುಂಟ, ಉಡಾಳ ಇದ್ದ. ಅವನು ಎಂ ಬಿ ಎ ಅಂತಿಮ ವರ್ಷದಲ್ಲಿ ಓದುತ್ತಿ ರುವಾಗ ಅಕಸ್ಮಾತ್ ಮೊದಲು ಅವನ ತಂದೆ ನಂತರ ತಾಯಿ ಅಪಘಾದಲ್ಲಿ ಮರಣ ಹೊಂದಿದರು. ಅವನ ಅಣ್ಣ ರಾಧಾಕೃಷ್ಣ ಅದೇ ತಾನೇ ಎಂ ಡಿ ಮುಗಿಸಿದ್ದ. ಆಸ್ಪತ್ರೆಯ ಎಲ್ಲಾ ಜವಾಬ್ದಾರಿ ಅಣ್ಣನ ಮೇಲೆ ಬಿದ್ದಿತು. ಮೂರು ತಲೆಮಾರಿನ ವ್ಯಾಪಾರವನ್ನು ಶ್ಯಾಮ್ ವಹಿಸಿದ. ಐದು ವರ್ಷಗಳಲ್ಲಿ ವ್ಯಾಪಾರ ಉತ್ತುಂಗಕ್ಕೆ ಏರಿತು. ತಂದೆ ತಾಯಿ ಸ್ಮರಣಾರ್ಥ ನೂರು ಹಾಸಿಗೆ ಇರುವ ಆಸ್ಪತ್ರೆ ಕಳೆದ ವರ್ಷ ಉದ್ಘಾಟನೆ ಆಯಿತು. ಸಧ್ಯ ನೀನು ಕೆಲಸಕ್ಕೆ ಸೇರು. ನಿನಗೆ ಒಳ್ಳೇಯ ಭವಿಷ್ಯ ಅಗುವದು. ನನ್ನ ಆಶೀರ್ವಾದ ಇದೆ,” ಎಂದರು.

ಒಂದು ವಾರದ ನಂತರ ಸುವರ್ಣ ತನ್ನ ನಿರ್ಧಾರವನ್ನು ಶ್ಯಾಮ್ ಹೇಳುವ ಮೊದಲು ಅವನಿಗೆ ಒಂದು ಪ್ರಶ್ನೆ ಕೇಳಿದಳು.

"ಸರ್, ನಾನು ನಿಮ್ಮ ನಿರೀಕ್ಷೆಗಳನ್ನು ಪೂರೈಸುತ್ತೇನೆ ಎಂದು ಹೇಗೆ ಭಾವಿಸಿದ್ದೀರಿ?"

ಶ್ಯಾಮ್ ಅವರಿಗೆ ಆಶ್ಚರ್ಯದ ಜೊತೆಗೆ ಆಕೆಯ ಮುಗ್ಧ ಮನಸ್ಸು ನೋಡಿ ತುಂಬಾ ಪ್ರಭಾವ ಆಯಿತು.

"Face is the index of a man. ಇದೇ ನನ್ನ ಉತ್ತರ," ಎಂದು ನಗುತ್ತಾ ಹೇಳಿದ.

ಮುಂದೆ ಒಂದು ತಿಂಗಳು ಆದ ಮೇಲೆ ಸುವರ್ಣ, ಶ್ಯಾಮ್ ಅವರ ಪರ್ಸನಲ್ ಸೆಕ್ರೆಟರಿ ಆದಳು. ಅವರಿಬ್ಬರೂ ಸನಿಹಕ್ಕೆ ಬಂದು ಪ್ರೇಮಿಗಳು ಆಗುವದಕ್ಕೆ ತಡವಾಗಲಿಲ್ಲ.

ಈ ಮಧ್ಯ ಸುವರ್ಣ ಳ ದೂರ ಸಂಭಂದಿ ಅದೇ ಶಾಲೆಯಲ್ಲಿ ಶಿಕ್ಷಕ ಎಂದು ಕೆಲಸ ಮಾಡುತ್ತಿದ್ದ ಧನಂಜಯ ರಾಜಾಪುರ ಆಕೆಯ ಜೊತೆಗೆ ಮದುವೆ ಆಗಲು ಬಹಳ ದಿವಸ ದಿಂದ ಕೇಳುತ್ತಿದ್ದ. ಪ್ರಸ್ತುತ ಸುವರ್ಣ ಸಾಹುಕಾರ ಶ್ಯಾಮ್ ಅವರಲ್ಲಿ ಕೆಲಸ ಮಾಡುವದು ಹಾಗೂ ಅವರ ಜೊತೆಗೆ ಲವ್ ಮಾಡುವದು ತಿಳಿದು ಕೋಪ ಬಂದಿತು.

ಒಂದು ದಿವಸ ಸುವರ್ಣ ಶಾಲೆಗೆ ಕೆಲಸಕ್ಕೆ ರಾಜೀನಾಮೆ ಕೊಡಲು ಬಂದಾಗ ಆಕೆಯನ್ನು ಕೇಳಿಯೇ ಬಿಟ್ಟ.

"ಇದೇನು ಸುವರ್ಣ, ನಾನು ನಿನಗೆ ಮನಸಾರೆ ಪ್ರೀತಿಸಿದೆ. ನಿನ್ನ ಜೊತೆಗೆ ಮದುವೆ ಆಗುವ ಆಕಾಂಕ್ಷೆ ಇತ್ತು. ನಾನು ಬಡವ ನೀನು ಬಡವಿ ಒಲವೇ ನಮ್ಮ ಬದುಕು ಆಗುವದನ್ನು ಬಿಟ್ಟು ಸಾಹುಕಾರನ ಕೈ ಹಿಡಿಯಲು ನಿರ್ಧಾರ ಮಾಡಿದ್ದಿ. ದುಡುಕ ಬೇಡ ಇನ್ನೂ ಸಮಯ ಮಿಂಚಿಲ್ಲ," ಎಂದ.

ಸುವರ್ಣ ಸಿಟ್ಟಿನಿಂದ, "ನನ್ನ ಅಮ್ಮ ಅಪ್ಪ ಇಬ್ಬರೂ ಅನಾ ರೋಗ್ಯದಿಂದ ಹಾಸಿಗೆ ಹಿಡಿದ ಸಮಯ ದಲ್ಲಿ ಹಣದ ಸಹಾಯ ಮಾಡಲು ನಿನಗೆ ಅಂಗಲಾಚಿ ಬೇಡಿ ಕೊಂಡೆ. ನೀನು ಸಹಾಯ ಮಾಡುವದು ದೂರ ಉಳಿಯಿತು, ಆಪ್ಪ ಅಮ್ಮ ಬದುಕಿದ್ದಾರೋ ಇಲ್ಲ ಎಂದು ಕೇಳಲು ಬರದ ನೀನು ಈಗ ಪ್ರೀತಿಯ ನಾಟಕ ಮಾಡಲು ನಾಚಿಕೆ ಆಗಲ್ವೆ?" ಎಂದು ಅವನ ಮುಖ್ಯಕ್ಕೆ ಚಾಟಿ ಹೊಡೆದಂತೆ ಹೇಳಿ ಹೋಗಿಯೇ ಬಿಟ್ಟಳು.

ಆಕೆಯ ಪ್ರಾಮಾಣಿಕತೆ ಹಾಗೂ ಬುದ್ಧಿಮತ್ತೆ ಯಿಂದ ಒಂದು ವರ್ಷದಲ್ಲಿ ಶ್ಯಾಮನ ವ್ಯಾಪಾರ ದಿನೇ ದಿನೇ ವೃದ್ಧಿ ಆಯಿತು. ಒಂದು ದಿವಸ ಸಮಯ ನೋಡಿಕೊಂಡು ಶ್ಯಾಮ್ ತನ್ನ ಇಂಗಿತ ಆಕೆಗೆ ಹೇಳಿಯೇ ಬಿಟ್ಟ.

ಸುವರ್ಣಗೆ ಆದ ಸಂತೋಷ ಆತ ಗಮನಿಸಿದ.

"Made for each other' ಎಂದು ಮದುವೆಗೆ ಒಪ್ಪಿಗೆ ಕೊಟ್ಟೇ ಬಿಟ್ಟಳು. ಶುಭ ಮುಹೂರ್ತ ದಂದು ಇಬ್ಬರ ಮದುವೆ ವಿಜೃಂಭಣೆಯಿಂದ ನೆರವೇರಿಸಿದರು. ಶ್ಯಾಮ ತನ್ನ ಬಾಳ ಸಂಗಾತಿಗೆ ಸುವರ್ಣಾಗೆ ಶ್ಯಾಮಲಾ ಎಂದು ಕರೆದ.

ಹನಿಮೂನ್ ಟ್ರಿಪ್ ಗಾಗಿ ಕಾಶ್ಮೀರಕ್ಕೆ ಹೋದರು. ನಿಸರ್ಗದ ಮಡಿಲಲ್ಲಿ ಜಾಲಿ ಇರುವಾಗ ಶ್ಯಾಮ್ ಪ್ರೀತಿಯಿಂದ ಹೇಳಿದ,

"ಈಗ ನೀನು ಶ್ಯಾಮ ನ ಶ್ಯಾಮಲೆ."

"ಅಲ್ಲ, ನೀನು ಶ್ಯಾಮಲೆಯ ಶ್ಯಾಮ," ಎಂದಳು.

ಇಬ್ಬರ ನಗು ಆಕಾಶ ಮುಟ್ಟಿತು.

“ಅಲ್ಲಾರಿ, ನನ್ನದೊಂದು ಪ್ರಶ್ನೆ.”

“ಅದೇನು?”

“ನಾನು ಬಡವಿ ಹಾಗೂ ಅನಾಥೆ ಮೇಲಾಗಿ ರೂಪವತಿ ಅಲ್ಲ. ನನ್ನ ಕೈ ಏಕೆ ಹಿಡಿದೇ?”

“ನಿನ್ನ ಸರಳತೆ, ಬುದ್ಧಿಮತ್ತೆ,ಅಂತ:ಕರಣ ಜೊತೆಗೆ ನಿನ್ನ ನೈಜ ಸೌಂದರ್ಯ ಕ್ಕೆ ಮರುಳಾದೆ.”

"ನಮ್ಮ ಮನಸ್ಸುಗಳು ಒಂದಾದ ಮೇಲೆ ಮಿಲನ ಆಗುವದು ಸಹಜ,”ಎಂದಳು ಶ್ಯಾಮಲ.

ಅಪ್ಪುಗೆಯಲ್ಲಿ ಇದ್ದ ಶ್ಯಾಮ್,ಶ್ಯಾಮಲಾ ಗೆ ರೋಮಾಂಚನ.