ಮಲೆನಾಡಿನ ದಟ್ಟ ಅಡವಿಯ ಮಧ್ಯೆ ಶಿವಪುರ ಎಂಬ ಪುಟ್ಟ ಹಳ್ಳಿ ಇತ್ತು. ಆ ಹಳ್ಳಿಯ ಕೊನೆಯಲ್ಲಿ ಬೆಟ್ಟದ ತುದಿಯ ಮೇಲೆ ಒಂದು ಬಂಗಲೆ ಇತ್ತು. ಹಳ್ಳಿಯ ಜನ ಆ ಬಂಗಲೆಯನ್ನು 'ಸಾವಿನ ಮನೆ' ಎಂದು ಕರೆಯುತ್ತಿದ್ದರು. ಆದರೆ ಆ ಬಂಗಲೆಯಲ್ಲಿ ವಾಸವಿದ್ದ ಯುವತಿ ತುಳಸಿಗೆ ಮಾತ್ರ ಅದು ತನ್ನ ಪ್ರಾಣಕ್ಕಿಂತ ಪ್ರಿಯವಾಗಿತ್ತು. ತುಳಸಿ ಒಬ್ಬ ಆಯುರ್ವೇದ ತಜ್ಞೆ. ಅವಳ ಇಡೀ ಜಗತ್ತು ಆ ಮನೆಯ ಅಂಗಳದಲ್ಲಿರುವ ಅಪರೂಪದ ಗಿಡಮೂಲಿಕೆಗಳ ಸುತ್ತಲೇ ಇತ್ತು.
ಬಂಗಲೆಯ ಅಂಗಳದ ಮಧ್ಯದಲ್ಲಿ ಒಂದು ವಿಶಿಷ್ಟವಾದ ತುಳಸಿ ಗಿಡವಿತ್ತು. ಅದರ ಎಲೆಗಳು ಸಾಮಾನ್ಯ ಹಸಿರು ಬಣ್ಣದ್ದಾಗಿರಲಿಲ್ಲ ಅವು ಕಡು ನೀಲಿ ಮತ್ತು ಕೆಂಪು ಬಣ್ಣದ ಮಿಶ್ರಣವಾಗಿದ್ದವು. ಆ ಗಿಡದಿಂದ ಹೊರಬರುವ ಸುಗಂಧ ಇಡೀ ಬಂಗಲೆಯನ್ನು ಆವರಿಸುತ್ತಿತ್ತು. ಆದರೆ ಆ ಸುಗಂಧದ ಹಿಂದೆ ಒಂದು ಕರಾಳ ರಹಸ್ಯ ಅಡಗಿದೆ ಎಂಬುದು ಯಾರಿಗೂ ತಿಳಿದಿರಲಿಲ್ಲ.
ಕಳೆದ ಒಂದು ತಿಂಗಳಿನಿಂದ ತುಳಸಿಗೆ ಒಂದು ವಿಚಿತ್ರ ಕಾಯಿಲೆ ಶುರುವಾಗಿತ್ತು. ಅವಳಿಗೆ ರಾತ್ರಿ ನಡೆದದ್ದು ಬೆಳಿಗ್ಗೆ ನೆನಪಿರುತ್ತಿರಲಿಲ್ಲ. ಪ್ರತಿದಿನ ಬೆಳಿಗ್ಗೆ ಎದ್ದಾಗ ಅವಳ ಬಟ್ಟೆಗಳ ಮೇಲೆ ಮಣ್ಣಿನ ಕಲೆಗಳಿರುತ್ತಿದ್ದವು ಮತ್ತು ಅವಳ ಉಗುರುಗಳ ಸಂಧಿಯಲ್ಲಿ ರಕ್ತದ ಒಣಗಿದ ಕಲೆಗಳು ಕಾಣಿಸುತ್ತಿದ್ದವು. ಅವಳು ತನ್ನ ಮನೆಯ ಸಿಸಿಟಿವಿ ಕ್ಯಾಮೆರಾಗಳನ್ನು ಪರಿಶೀಲಿಸಿದಾಗ, ಸರಿಯಾಗಿ ರಾತ್ರಿ 1 ಗಂಟೆಗೆ ಕ್ಯಾಮೆರಾಗಳು ನಿಂತುಹೋಗುತ್ತಿದ್ದುದು ಕಂಡುಬಂದಿತು.
ಒಂದು ದಿನ ಬೆಳಿಗ್ಗೆ ಅವಳ ಮನೆಗೆ ಡಾ. ಸಂಜಯ್ ಬಂದ. ಸಂಜಯ್ ತುಳಸಿಯ ತಂದೆಯ ಸ್ನೇಹಿತ ಮತ್ತು ಹಳೆಯ ಕುಟುಂಬದ ವೈದ್ಯ. ತುಳಸಿ, ನಿನ್ನ ಆರೋಗ್ಯ ಹದಗೆಡುತ್ತಿದೆ. ನಿನ್ನ ತಂದೆ ಸಾಯುವ ಮುನ್ನ ನಿನ್ನ ಜವಾಬ್ದಾರಿಯನ್ನು ನನಗೆ ವಹಿಸಿದ್ದರು. ನೀನು ಈ ಬಂಗಲೆಯನ್ನು ಬಿಟ್ಟು ನಗರಕ್ಕೆ ಬರುವುದು ಒಳ್ಳೆಯದು ಎಂದು ಅವನು ಸಲಹೆ ನೀಡಿದ.
ಆದರೆ ತುಳಸಿ ಒಪ್ಪಲಿಲ್ಲ. ಸಂಜಯ್ ಅಂಕಲ್, ಈ ತುಳಸಿ ಗಿಡವನ್ನು ಬಿಟ್ಟು ನಾನು ಎಲ್ಲಿಗೂ ಬರುವುದಿಲ್ಲ. ಇದರ ಎಲೆಗಳಿಂದ ನಾನು ತಯಾರಿಸುತ್ತಿರುವ ಔಷಧ ಜಗತ್ತನ್ನೇ ಬದಲಿಸಬಲ್ಲದು ಎಂದು ಅವಳು ದೃಢವಾಗಿ ಹೇಳಿದಳು.
ಸಂಜಯ್ ನಕ್ಕ, ಆದರೆ ಆ ನಗುವಿನಲ್ಲಿ ಒಂದು ರೀತಿಯ ಕ್ರೂರತೆ ಇತ್ತು. ಆ ಔಷಧ ನನಗೂ ಬೇಕು ತುಳಸಿ. ಅದರಲ್ಲಿರುವ 'ಅಮೃತ' ಅಂಶ ಮನುಷ್ಯನನ್ನು ಸಾವಿನಿಂದಲೂ ಪಾರು ಮಾಡಬಲ್ಲದು ಎಂದು ನಿನ್ನ ತಂದೆ ಹೇಳುತ್ತಿದ್ದರು.
ಅಂದು ಸಂಜೆ ಮಳೆ ಸುರಿಯುತ್ತಿದ್ದಾಗ ಒಬ್ಬ ಅಪರಿಚಿತ ವ್ಯಕ್ತಿ ಬಂಗಲೆಗೆ ಬಂದ. ಅವನು ಹರಿದ ಬಟ್ಟೆ ಧರಿಸಿದ್ದ, ಕಣ್ಣುಗಳಲ್ಲಿ ವಿಪರೀತ ಭಯವಿತ್ತು. ಅಮ್ಮಾ ಆ ಗಿಡವನ್ನು ಮುಟ್ಟಬೇಡಿ ಆ ತುಳಸಿ ದಳಗಳು ಕೇವಲ ಎಲೆಗಳಲ್ಲ, ಅವು ಹಸಿವಿನಿಂದ ಕಾಯುತ್ತಿರುವ ರಾಕ್ಷಸನ ನಾಲಿಗೆಗಳು ಎಂದು ಕಿರುಚಿದ.
ತುಳಸಿ ಅವನನ್ನು ಸಮಾಧಾನಪಡಿಸಲು ಹೋದಾಗ, ಅವನು ಅವಳ ಕಿವಿ ಹತ್ತಿರ ಬಂದು ಪಿಸುಗುಟ್ಟಿದ, ನಿಮ್ಮ ತಂದೆ ಸತ್ತಿದ್ದು ಕಾಯಿಲೆಯಿಂದಲ್ಲ ಅವರು ಆ ಗಿಡಕ್ಕೆ ಬಲಿಯಾದರು. ಈಗ ನಿಮ್ಮ ಸರದಿ ಇಷ್ಟನ್ನು ಹೇಳಿ ಅವನು ಕಾಡಿನ ಕತ್ತಲೆಯಲ್ಲಿ ಮಾಯವಾದನು.
ತುಳಸಿ ಬೆಚ್ಚಿಬಿದ್ದಳು. ಅವಳು ಅಂದೇ ರಾತ್ರಿ ಆ ಗಿಡದ ರಹಸ್ಯ ಭೇದಿಸಲು ನಿರ್ಧರಿಸಿದಳು. ಅವಳು ತನ್ನ ಮಲಗುವ ಕೋಣೆಯ ಕಿಟಕಿಯಿಂದ ಗಿಡವನ್ನೇ ಗಮನಿಸುತ್ತಾ ಕುಳಿತಳು. ಸರಿಯಾಗಿ ರಾತ್ರಿ 1 ಗಂಟೆ. ಆಕಾಶದಲ್ಲಿ ಚಂದ್ರ ಮೋಡದ ಹಿಂದೆ ಮರೆಯಾದಾಗ, ಅಂಗಳದಲ್ಲಿ ಒಂದು ನೆರಳು ಚಲಿಸಿತು. ಆ ನೆರಳು ಬೇರೆ ಯಾರದ್ದೂ ಅಲ್ಲ, ಸ್ವತಃ ತುಳಸಿಯದ್ದೇ ಆಗಿತ್ತು. ಅವಳು ನಿದ್ದೆಯಲ್ಲೇ ನಡೆದುಕೊಂಡು ಹೋಗಿ ಗಿಡದ ಮುಂದೆ ನಿಂತಳು. ಅವಳು ಆ ನೀಲಿ ತುಳಸಿಯ ಒಂದು ದಳವನ್ನು ಕಿತ್ತು ತಿಂದಳು. ತಕ್ಷಣ ಅವಳ ಕಣ್ಣುಗಳು ಪೂರ್ಣ ಕೆಂಪಾದವು. ಅವಳು ಅಂಗಳದ ಒಂದು ಮೂಲೆಯಲ್ಲಿ ನೆಲವನ್ನು ತನ್ನ ಕೈಗಳಿಂದಲೇ ಅಗೆಯಲು ಶುರು ಮಾಡಿದಳು.
ಅಗೆಯುತ್ತಾ ಹೋದಂತೆ ಮಣ್ಣಿನ ಅಡಿಯಿಂದ ಒಂದು ಮರದ ಪೆಟ್ಟಿಗೆ ಸಿಕ್ಕಿತು. ಅದರಲ್ಲಿ ತುಳಸಿಯ ತಂದೆಯ ಡೈರಿ ಇತ್ತು. ತುಳಸಿ ನಿದ್ದೆಯಲ್ಲೇ ಇದ್ದರೂ ಅವಳ ಅಂತರಾತ್ಮ ಆ ಡೈರಿಯ ಪುಟಗಳನ್ನು ತಿರುವಿತು. ಅದರಲ್ಲಿ ಬರೆದಿದ್ದ ಸಾಲುಗಳು ಮೈ ಜುಂ ಎನಿಸುವಂತಿದ್ದವು. ಈ ತುಳಸಿ ಗಿಡ ಸಾಮಾನ್ಯವಾದುದಲ್ಲ. ಇದು ನೂರಾರು ವರ್ಷಗಳ ಹಿಂದೆ ಒಬ್ಬ ಮಾಂತ್ರಿಕನು ಸೃಷ್ಟಿಸಿದ ರಕ್ತ ತುಳಸಿ ಇದಕ್ಕೆ ಪ್ರತಿ ಅಮಾವಾಸ್ಯೆಯಂದು ಮನುಷ್ಯನ ರಕ್ತದ ಅಗತ್ಯವಿರುತ್ತದೆ. ನಾನು ಈ ಗಿಡವನ್ನು ರಕ್ಷಿಸಲು ನನ್ನ ಪ್ರಾಣವನ್ನೇ ನೀಡುತ್ತಿದ್ದೇನೆ. ತುಳಸಿ, ನೀನು ಈ ಗಿಡದ ಮುಂದಿನ ರಕ್ಷಕಿ. ಯಾರಾದರೂ ಈ ಗಿಡದ ರಹಸ್ಯ ತಿಳಿಯಲು ಬಂದರೆ, ಈ ತುಳಸಿ ದಳಗಳೇ ಅವರ ಅಂತ್ಯ ಹಾಡುತ್ತವೆ.
ಅಷ್ಟರಲ್ಲಿ ಹಿಂದಿನಿಂದ ಚಪ್ಪಾಳೆಯ ಸದ್ದು ಕೇಳಿಸಿತು. ತುಳಸಿ ನಿದ್ದೆಯಿಂದ ಎಚ್ಚರವಾದಳು. ಎದುರಿಗೆ ಸಂಜಯ್ ಕೈಯಲ್ಲಿ ರಿವಾಲ್ವರ್ ಹಿಡಿದು ನಿಂತಿದ್ದ. ಅವನ ಹಿಂದೆ ಇಬ್ಬರು ಗುಂಡಾಗಳಿದ್ದರು.ಧನ್ಯವಾದಗಳು ತುಳಸಿ ಇಷ್ಟು ದಿನ ಈ ಡೈರಿಗಾಗಿ ನಾನು ಕಾಯುತ್ತಿದ್ದೆ. ನಿನ್ನ ತಂದೆ ಇದನ್ನು ಎಲ್ಲಿ ಹೂತಿದ್ದಾರೆ ಎಂದು ತಿಳಿಯಲು ನಿನಗೆ ಪ್ರತಿದಿನ ರಾತ್ರಿ ಸಮ್ಮೋಹಿನಿಯ ಔಷಧಿ ನೀಡುತ್ತಿದ್ದೆ. ನೀನೇ ಈ ಡೈರಿಯನ್ನು ಹೊರತೆಗೆದು ನನಗೆ ಸಹಾಯ ಮಾಡಿದೆ ಎಂದು ಸಂಜಯ್ ಅಟ್ಟಹಾಸದಿಂದ ನಕ್ಕ.
ಸಂಜಯ್ ಅಂಕಲ್ ನೀವು ನಂಬಿಕ ದ್ರೋಹಿ ನನ್ನ ತಂದೆಯನ್ನು ನೀವೇ ಕೊಂದಿದ್ದೀರಾ? ತುಳಸಿ ಆಕ್ರೋಶದಿಂದ ಕೇಳಿದಳು.
ಹೌದು ಈ ಗಿಡದ ಎಲೆಗಳಿಂದ ತಯಾರಿಸುವ ಔಷಧದ ಫಾರ್ಮುಲಾ ನನಗಷ್ಟೇ ಸಿಗಬೇಕು. ಇದನ್ನು ಮಾರಿ ನಾನು ಸಾವಿರಾರು ಕೋಟಿ ಗಳಿಸುತ್ತೇನೆ. ಈಗ ನಿನ್ನ ಮತ್ತು ಈ ಡೈರಿಯ ಅವಶ್ಯಕತೆ ನನಗಿಲ್ಲ ಎಂದು ಅವನು ಟ್ರಿಗರ್ ಒತ್ತಲು ಸಿದ್ಧನಾದ.
ಸಂಜಯ್ ಗುಂಡು ಹಾರಿಸುವ ಮೊದಲೇ ಅಂಗಳದಲ್ಲಿ ವಿಚಿತ್ರವಾದ ಬದಲಾವಣೆಯಾಯಿತು. ಗಾಳಿ ಬೀಸಲು ಶುರುವಾಯಿತು. ಆ ತುಳಸಿ ಗಿಡದ ಸುಗಂಧ ವಿಪರೀತವಾಯಿತು. ಸಂಜಯ್‌ನ ಗುಂಡಾಗಳು ಇದ್ದಕ್ಕಿದ್ದಂತೆ ಉಸಿರಾಡಲು ಕಷ್ಟಪಟ್ಟು ನೆಲಕ್ಕೆ ಬಿದ್ದರು. ಆ ತುಳಸಿ ಗಿಡದ ಎಲೆಗಳಿಂದ ನೀಲಿ ಬಣ್ಣದ ಅನಿಲ ಹೊರಬರುತ್ತಿತ್ತು. ಅದು ಕೇವಲ ಸುಗಂಧವಲ್ಲ, ಅದೊಂದು ಪ್ರಬಲವಾದ ವಿಷಕಾರಿ ಅನಿಲವಾಗಿತ್ತು. ಸಂಜಯ್ ಗಾಬರಿಯಿಂದ ಹಿಂದಕ್ಕೆ ಸರಿದ. ಇದೇನು ಇದೇನು ಮಾಯೆ? ಎಂದು ಕಿರುಚಿದ.
ತುಳಸಿ ಮೌನವಾಗಿ ನಿಂತಿದ್ದಳು. ಅವಳಿಗೆ ಆ ಅನಿಲದ ಪರಿಣಾಮವಾಗುತ್ತಿರಲಿಲ್ಲ. ಯಾಕೆಂದರೆ ಅವಳು ಬಾಲ್ಯದಿಂದಲೂ ಆ ಗಿಡದ ಪರಿಸರದಲ್ಲೇ ಬೆಳೆದಿದ್ದಳು, ಅವಳ ದೇಹಕ್ಕೆ ಆ ವಿಷವೇ ಮದ್ದಾಗಿತ್ತು.
ನೀವು ಹೇಳಿದ್ದು ಸರಿ ಸಂಜಯ್ ಅಂಕಲ್, ಈ ಗಿಡಕ್ಕೆ ರಕ್ಷಕಿ ಬೇಕು. ಆದರೆ ಆ ರಕ್ಷಕಿಯನ್ನು ಮುಟ್ಟುವ ಧೈರ್ಯ ಮಾಡಿದವರಿಗೆ ಈ 'ತುಳಸಿ ದಳಗಳು ಮರಣದಂಡನೆ ನೀಡುತ್ತವೆ, ಎಂದು ತುಳಸಿ ಶಾಂತವಾಗಿ ಹೇಳಿದಳು.
ಸಂಜಯ್‌ನ ಕಣ್ಣುಗಳು ಹೊರಬಂದವು, ಅವನ ಚರ್ಮ ನೀಲಿ ಬಣ್ಣಕ್ಕೆ ತಿರುಗಿತು. ಅವನು ಆ ತುಳಸಿ ಗಿಡದ ಮೇಲೆಯೇ ಬಿದ್ದ. ಗಿಡದ ಕೊಂಬೆಗಳು ಅವನ ದೇಹವನ್ನು ಸುತ್ತುವರೆದವು. ಕೆಲವು ನಿಮಿಷಗಳಲ್ಲಿ ಸಂಜಯ್ ಮತ್ತು ಅವನ ಗುಂಡಾಗಳು ಅಲ್ಲಿ ಹೆಣವಾಗಿ ಬಿದ್ದಿದ್ದರು.
ಮರುದಿನ ಬೆಳಿಗ್ಗೆ ಪೊಲೀಸ್ ಇನ್ಸ್‌ಪೆಕ್ಟರ್ ತನಿಖೆಗೆ ಬಂದರು. ಅಂಗಳದಲ್ಲಿ ಸಂಜಯ್ ಮತ್ತು ಅವನ ತಂಡದ ಶವಗಳಿದ್ದವು. ಆದರೆ ಆ ಶವಗಳ ಮೇಲೆ ಯಾವುದೇ ಗಾಯಗಳಿರಲಿಲ್ಲ.
ಡಾಕ್ಟರ್ ಸಂಜಯ್ ಹೃದಯಾಘಾತದಿಂದ ಸತ್ತಿರಬಹುದು ಎಂದು ಅನ್ನಿಸುತ್ತದೆ. ಆದರೆ ಈ ಅಂಗಳದಲ್ಲಿದ್ದ ಆ ದೊಡ್ಡ ತುಳಸಿ ಗಿಡ ಎಲ್ಲಿ ಹೋಯಿತು? ಎಂದು ಇನ್ಸ್‌ಪೆಕ್ಟರ್ ಕೇಳಿದರು. ಅಂಗಳ ಈಗ ಸಂಪೂರ್ಣ ಖಾಲಿಯಾಗಿತ್ತು. ಅಲ್ಲಿ ಕೇವಲ ಒಣಗಿದ ಮಣ್ಣು ಇತ್ತು. ತುಳಸಿ ಬಂಗಲೆಯ ವರಾಂಡದಲ್ಲಿ ಕುಳಿತು ಚಹಾ ಕುಡಿಯುತ್ತಿದ್ದಳು. ಅವಳ ಮುಖದಲ್ಲಿ ಯಾವುದೇ ಭಯವಿರಲಿಲ್ಲ. ಸರ್, ಆ ಗಿಡ ನಿನ್ನೆ ರಾತ್ರಿ ಸುರಿದ ಮಳೆಗೆ ಕೊಚ್ಚಿ ಹೋಗಿರಬೇಕು ಎಂದು ಅವಳು ಸರಳವಾಗಿ ಉತ್ತರಿಸಿದಳು.
ಪೊಲೀಸರು ಹೋದ ಮೇಲೆ ತುಳಸಿ ತನ್ನ ಮಲಗುವ ಕೋಣೆಗೆ ಹೋದಳು. ಅಲ್ಲಿ ಒಂದು ಸಣ್ಣ ಕುಂಡದಲ್ಲಿ ಆ ನೀಲಿ ತುಳಸಿ ಗಿಡದ ಒಂದು ಸಣ್ಣ ಮೊಳಕೆ ಚಿಗುರುತ್ತಿತ್ತು. ತುಳಸಿ ತನ್ನ ಬಲಗೈಯನ್ನು ಸಣ್ಣದಾಗಿ ಕುಯ್ದುಕೊಂಡು, ಹರಿಯುತ್ತಿದ್ದ ರಕ್ತದ ಒಂದು ಹನಿಯನ್ನು ಆ ಮೊಳಕೆಯ ಮೇಲೆ ಹಾಕಿದಳು. ಮೊಳಕೆ ತಕ್ಷಣವೇ ಅರಳಿತು. ತುಳಸಿಯ ಕಣ್ಣುಗಳು ಮತ್ತೆ ನೀಲಿ ಬಣ್ಣಕ್ಕೆ ತಿರುಗಿದವು.
ನಿಜವಾದ ಟ್ವಿಸ್ಟ್ ಏನೆಂದರೆ ತುಳಸಿ ಎಂಬ ಯುವತಿ ಇಪ್ಪತ್ತು ವರ್ಷಗಳ ಹಿಂದೆಯೇ ತೀರಿಹೋಗಿದ್ದಳು ಅಂದು ಅವಳ ತಂದೆ ಅವಳನ್ನು ಬದುಕಿಸಲು ಆ 'ರಕ್ತ ತುಳಸಿಯ ಸಾರವನ್ನು ಅವಳ ದೇಹಕ್ಕೆ ಇಂಜೆಕ್ಟ್ ಮಾಡಿದ್ದರು. ಈಗಿರುವ ತುಳಸಿ ಮನುಷ್ಯಳಲ್ಲ, ಅವಳು ಆ ಗಿಡದ ಮಾನವ ರೂಪದ ಪ್ರತಿಬಿಂಬ ಆ ಗಿಡವೇ ಅವಳು, ಅವಳೇ ಆ ಗಿಡ. ತಂದೆ ಡೈರಿಯಲ್ಲಿ ಬರೆದಿದ್ದ ರಕ್ಷಕಿ ಬೇರೆ ಯಾರೂ ಅಲ್ಲ, ಮನುಷ್ಯ ರೂಪ ಪಡೆದ ಅದೇ ಸಸ್ಯ.