Zero evidence in Kannada Crime Stories by Saandeep Joshi books and stories PDF | ಶೂನ್ಯ ಸಾಕ್ಷಿ

Featured Books
Categories
Share

ಶೂನ್ಯ ಸಾಕ್ಷಿ

ಬೆಂಗಳೂರಿನ ಆ ಪ್ರತಿಷ್ಠಿತ 'ಸ್ಕೈಲೈನ್' ಅಪಾರ್ಟ್‌ಮೆಂಟ್‌ನ ಗಾಳಿಯಲ್ಲಿ ಅಂದು ಹಸಿ ರಕ್ತದ ಘಾಟು ವಾಸನೆ ತುಂಬಿ ತುಳುಕುತ್ತಿತ್ತು. ಮಳೆ ಸುರಿಯದಿದ್ದರೂ ವಾತಾವರಣದಲ್ಲಿ ಒಂದು ರೀತಿಯ ಮೈ ಜುಂ ಎನಿಸುವ ನಿಗೂಢ ತಂಪಿತ್ತು. ಸರಿಯಾಗಿ ಬೆಳಗಿನ ಜಾವ 3:15ಕ್ಕೆ 404ನೇ ನಂಬರಿನ ಫ್ಲಾಟ್‌ನಿಂದ ಆ ದಾರುಣ ಕಿರುಚಾಟ ಕೇಳಿಬಂದಾಗ, ಸೆಕ್ಯೂರಿಟಿ ಗಾರ್ಡ್ ರಾಮಣ್ಣನ ಎದೆಯಲ್ಲಿ ನಡುಕ ಶುರುವಾಗಿತ್ತು. ಆತ ಓಡೋಡಿ ಬಂದು ಬಾಗಿಲು ಬಡಿದಾಗ, ಲಾಕ್ ಆಗದ ಆ ಬಾಗಿಲು ತಾನಾಗಿಯೇ ಕ್ರೇ ಎನ್ನುತ್ತಾ ಒಳಗಡೆ ಸರಿಯಿತು. ಒಳಗೆ ಹೋದ ರಾಮಣ್ಣನಿಗೆ ಕಂಡಿದ್ದು ಸಾವಿನ ಕ್ರೂರ ನರ್ತನ. ಲಿವಿಂಗ್ ರೂಮಿನ ಸೋಫಾದ ಮೇಲೆ ಆಕಾಶ್ ಕುಳಿತಿದ್ದ. ಇಡೀ ಅಪಾರ್ಟ್‌ಮೆಂಟ್ ನಿವಾಸಿಗಳಿಗೆ ಆಕಾಶ್ ಮೂರು ದಿನಗಳ ಹಿಂದಷ್ಟೇ ರಾಷ್ಟ್ರೀಯ ಹೆದ್ದಾರಿಯ ಭೀಕರ ಅಪಘಾತದಲ್ಲಿ ಅಸುನೀಗಿದ್ದಾನೆ ಎಂಬುದು ತಿಳಿದಿತ್ತು, ಅವನ ಅಂತ್ಯಕ್ರಿಯೆಯೂ ವಿಧಿವಿಧಾನಗಳಂತೆ ಮುಗಿದಿತ್ತು. ಆದರೆ ಈಗ, ಅದೇ ಆಕಾಶ್ ಅಲ್ಲಿ ಕುಳಿತಿದ್ದಾನೆ, ಅವನ ಕಣ್ಣುಗಳಲ್ಲಿ ಜೀವಕಳೆ ಇರಲಿಲ್ಲ, ನೋಟ ಶೂನ್ಯವಾಗಿ ಚಾವಣಿಯನ್ನು ದಿಟ್ಟಿಸುತ್ತಿತ್ತು. ಕೈಯಲ್ಲಿ ಹಿಡಿದಿದ್ದ ಉದ್ದನೆಯ ಹರಿತವಾದ ಚಾಕುವಿನಿಂದ ರಕ್ತ ನೆಲಕ್ಕೆ ತೊಟ್ಟಿಕ್ಕುತ್ತಿತ್ತು. ನೆಲದ ಮೇಲೆ ಅವನ ಪತ್ನಿ ರಚನಾಳ ಶವ ಬಿದ್ದಿತ್ತು. ಅವಳ ಕುತ್ತಿಗೆಯನ್ನು ಯಾರೋ ಮೃಗದಂತೆ ಸೀಳಿದ್ದು ರಕ್ತದ ಮಡುವಿನಲ್ಲಿ ಅವಳ ಪ್ರಾಣಪಕ್ಷಿ ಹಾರಿಹೋಗಿತ್ತು.
ಇನ್ಸ್‌ಪೆಕ್ಟರ್ ಪೃಥ್ವಿ ಸ್ಥಳಕ್ಕೆ ಬಂದಾಗ ಬೆಳಿಗ್ಗೆ ಐದರ ಸಮಯ. ಆತ ಒಬ್ಬ ಪಕ್ಕಾ ರಾ ಆಫೀಸರ್, ನಿಯಮಗಳಿಗಿಂತ ತನ್ನ ಬುದ್ಧಿವಂತಿಕೆಯನ್ನೇ ಅತಿಯಾಗಿ ನಂಬಿದವನು. ಶವದ ಹತ್ತಿರ ಕುಳಿತು ತನ್ನ ಸಿಗರೆಟ್ ಹಚ್ಚಿಕೊಂಡ ಪೃಥ್ವಿಗೆ ಪಕ್ಕದಲ್ಲಿದ್ದ ಕಾನ್ಸ್ಟೇಬಲ್ ನಡುಗುತ್ತಲೇ ಫೋರೆನ್ಸಿಕ್ ರಿಪೋರ್ಟ್ ನೀಡಿದ. ಆ ವರದಿಯ ಪ್ರಕಾರ ಆಕಾಶ್ ಮೂರು ದಿನದ ಹಿಂದೆಯೇ ಸತ್ತಿದ್ದ ಎಂಬುದು ವೈದ್ಯಕೀಯವಾಗಿ ಅಧಿಕೃತವಾಗಿತ್ತು. ಆದರೆ ಈ ಕೊಲೆ ನಡೆದಿದ್ದು ಕೇವಲ ಒಂದು ಗಂಟೆಯ ಹಿಂದೆ ಮತ್ತು ಚಾಕುವಿನ ಮೇಲಿರೋ ಬೆರಳಚ್ಚುಗಳು ಶವದಂತಿರೋ ಆಕಾಶ್‌ನದ್ದೇ ಆಗಿತ್ತು. ಪೃಥ್ವಿ ಹೊಗೆ ಬಿಡುತ್ತಾ ತಣ್ಣಗೆ ಹೇಳಿದ ಮಾತು ಅಲ್ಲಿನ ಗಾಳಿಯನ್ನೇ ಹೆಪ್ಪುಗಟ್ಟಿಸಿತ್ತು. ಸತ್ತವನು ಕೊಲೆ ಮಾಡೋಕೆ ಕಾನೂನಿನಲ್ಲಿ ಅವಕಾಶ ಇಲ್ಲ, ಆದರೆ ಈ ಸತ್ತವನು ಕಾನೂನಿನ ಅಪ್ಪನಂತೆ ವರ್ತಿಸುತ್ತಿದ್ದಾನೆ. ತನಿಖೆ ಮುಂದುವರೆದಂತೆ ಆಕಾಶ್‌ನ ಲ್ಯಾಪ್‌ಟಾಪ್‌ನಲ್ಲಿ ಒಂದು ನಿಗೂಢ ಇಮೇಲ್ ಪತ್ತೆಯಾಯಿತು. ಅದರಲ್ಲಿ "ನನ್ನ ನೆರಳನ್ನು ಸಾಯಿಸಲು ಒಬ್ಬ ಲೇಖಕ ಬೇಕಾಗಿದ್ದಾನೆ ಎಂಬ ಒಂದೇ ಸಾಲಿತ್ತು. ಆ ಇಮೇಲ್ ಕಳುಹಿಸಿದ್ದು ಉಡುಪಿಯ ಸಮರ್ಥ ಎಂಬ ಯುವಕನಿಗೆ.
ಪೃಥ್ವಿ ಆ ರಹಸ್ಯವನ್ನು ಬೇಧಿಸಲು ಉಡುಪಿಗೆ ಬಂದಾಗ ಸಮರ್ಥ ತನ್ನ ರೂಮಿನಲ್ಲಿ ಮಗ್ನನಾಗಿ ಬರೆಯುತ್ತಿದ್ದ. ಆ ಕೋಣೆಯ ತುಂಬಾ ಬೈಕ್ ರೈಡಿಂಗ್ ಗೇರ್ಸ್ ಮತ್ತು ಬಾಕ್ಸಿಂಗ್ ಗ್ಲೌಸ್‌ಗಳಿದ್ದವು, ಅದು ಒಬ್ಬ ಬರಹಗಾರನ ಕೋಣೆಗಿಂತ ಒಬ್ಬ ಹೋರಾಟಗಾರನ ಅಖಾಡದಂತೆ ಕಾಣುತ್ತಿತ್ತು. ಪೃಥ್ವಿ ಒಳಗೆ ಬಂದರೂ ಸಮರ್ಥ ತಲೆ ಎತ್ತಲಿಲ್ಲ. ನೀವು ಬರೋದು ಹತ್ತು ನಿಮಿಷ ತಡವಾಯಿತು ಸಾರ್, ನಾನು ಬರೆದ ಕಥೆಯಲ್ಲಿ ಇಷ್ಟೊತ್ತಿಗೆ ನೀವು ನನ್ನ ಕೊರಳಪಟ್ಟಿ ಹಿಡಿದು ಪ್ರಶ್ನೆ ಮಾಡಬೇಕಿತ್ತು ಎಂದು ಸಮರ್ಥ್ ತಣ್ಣಗೆ ಹೇಳಿದಾಗ ಪೃಥ್ವಿ ದಂಗಾದ. ಸಮರ್ಥ್ ಬರೆಯುತ್ತಿದ್ದ ಕಥೆಯ ಶೀರ್ಷಿಕೆ ಶೂನ್ಯ ಸಾಕ್ಷಿ ಎಂದಿತ್ತು ಮತ್ತು ಅದರಲ್ಲಿ ರಚನಾಳ ಕೊಲೆಯ ಪ್ರತಿಯೊಂದು ಸಣ್ಣ ವಿವರವೂ ಅಕ್ಷರಶಃ ದಾಖಲಾಗಿತ್ತು. ಪೃಥ್ವಿ ತನ್ನ ಸರ್ವಿಸ್ ರಿವಾಲ್ವರ್ ತೆಗೆದು ಸಮರ್ಥ್ ‌ನತ್ತ ಗುರಿ ಇಟ್ಟಾಗ, ಸಮರ್ಥ್ ನಗುತ್ತಲೇ ರಹಸ್ಯದ ಪದರಗಳನ್ನು ಬಿಚ್ಚಿಡಲು ಶುರುಮಾಡಿದ. ಆಕಾಶ್ ಕೇವಲ ಸೈಕಾಲಜಿಸ್ಟ್ ಆಗಿರಲಿಲ್ಲ, ಬದಲಾಗಿ ಆತ ಒಬ್ಬ ಮಾಸ್ಟರ್ ಮ್ಯಾನಿಪ್ಯುಲೇಟರ್ ಆಗಿದ್ದ. ಸಾಯುವ ಮುನ್ನ ತನ್ನ ಮೆದುಳಿನ ಆಲೋಚನೆಗಳನ್ನು ನನ್ನ ಬರವಣಿಗೆಯ ಮೂಲಕ ನಿಯಂತ್ರಿಸುವುದನ್ನು ಆತ ಕರಗತ ಮಾಡಿಕೊಂಡಿದ್ದ. ಹೆದ್ದಾರಿ ಅಪಘಾತದಲ್ಲಿ ಸತ್ತಿದ್ದು ಆಕಾಶ್‌ನಂತೆ ಕಾಣುವ ಬೇರೊಬ್ಬ ವ್ಯಕ್ತಿ, ಈಗ ಆಕಾಶ್ ಜೀವಂತವಾಗಿದ್ದು ರಚನಾಳನ್ನು ಅವನೇ ಕೊಂದಿದ್ದಾನೆ, ಆದರೆ ಜಗತ್ತಿನ ದೃಷ್ಟಿಯಲ್ಲಿ ಆತ ಇನ್ನೂ ಶವವಾಗಿಯೇ ಇದ್ದಾನೆ.
ಪೃಥ್ವಿ ಗೊಂದಲದಿಂದ ಕಿರುಚಾಡಿದಾಗ ಸಮರ್ಥ್ ತನ್ನ ಲೇಖನಿಯನ್ನು ಕಾಗದದ ಮೇಲೆ ಬಿಗಿಯಾಗಿ ಒತ್ತಿದ. ಸಮರ್ಥ್ ಇಲ್ಲಿ ಏನು ಬರೆಯುತ್ತಿದ್ದನೋ, ವಾಸ್ತವದಲ್ಲಿ ಅಲ್ಲಿ ಅದೇ ನಡೆಯುತ್ತಿತ್ತು. ಸಮರ್ಥ್ 'ಪೃಥ್ವಿಯ ಗನ್ ಕೆಳಗೆ ಬೀಳುತ್ತದೆ ಎಂದು ಬರೆದ ಕ್ಷಣವೇ ಪೃಥ್ವಿಯ ಕೈಗಳಿಂದ ಗನ್ ನೆಲಕ್ಕೆ ಬಿದ್ದಿತ್ತು, ಅವನ ಕೈಗಳಿಗೆ ಪಾರ್ಶ್ವವಾಯು ಹೊಡೆದಂತೆ ಭಾಸವಾಯಿತು. ಸಮರ್ಥ್ ಬರೆಯುತ್ತಿದ್ದದ್ದು ಕೇವಲ ಕಥೆಯಲ್ಲ, ಅದು ಹೈಪ್ನೋಟಿಕ್ ಸ್ಕ್ರಿಪ್ಟ್ ಆಗಿತ್ತು. ಕ್ಲೈಮ್ಯಾಕ್ಸ್ ಬರೆದ ನಂತರವೇ  ಲೇಖನಿ ಬರೆಯುವುದು ನಿಲ್ಲುತ್ತದೆ ಎಂದು ಸಮರ್ಥ್ ಘೋಷಿಸಿದಾಗ ಕಥೆಯ ಅಸಲಿ ತಿರುವು ಹೊರಬಂತು. ಆಕಾಶ್ ರಚನಾಳನ್ನು ಕೊಂದಿದ್ದು ಆಸ್ತಿಗಾಗಿ ಅಲ್ಲ, ಬದಲಾಗಿ ರಚನಾ ಪೋಲೀಸ್ ಇಲಾಖೆಯ ಒಳಗಿದ್ದ ಕರಾಳ ಮುಖಗಳನ್ನು ಬಯಲು ಮಾಡಲು ಹೊರಟಿದ್ದ ಇನ್ಫಾರ್ಮರ್ ಆಗಿದ್ದಳು. ಆಕಾಶ್ ಆ ಕೆಲಸವನ್ನು ಪೂರ್ತಿ ಮಾಡಲು ಸಮರ್ಥ್ ನ ಬರವಣಿಗೆಯನ್ನು ಅಸ್ತ್ರವಾಗಿ ಬಳಸಿಕೊಂಡಿದ್ದ. ಪೃಥ್ವಿಗೆ ತಾನು ಸಂಪೂರ್ಣವಾಗಿ ಸೋತಿರುವುದು ಅರ್ಥವಾದಾಗ ಸಮರ್ಥ್ ತನ್ನ ಲ್ಯಾಪ್‌ಟಾಪ್ ಮುಚ್ಚಿ, ತನ್ನ RTRT ಬೈಕ್ ಕೀ ಎತ್ತಿಕೊಂಡ. ಕ್ಲೈಮ್ಯಾಕ್ಸ್ ಬರೆಯಲು ಒಂದು ರಕ್ತದ ಹನಿ ಬಾಕಿ ಇದೆ ಮತ್ತು ಅದು ಅಫೀಸರ್ ಟೇಬಲ್ ಮೇಲೆ ಬೀಳಬೇಕು ಎಂದು ಹೇಳಿ ಆತ ಮಿಂಚಿನ ವೇಗದಲ್ಲಿ ಉಡುಪಿಯ ರಸ್ತೆಗಳಲ್ಲಿ ಮಾಯವಾದ. ಮರುದಿನ ಪತ್ರಿಕೆಗಳಲ್ಲಿ ಪೋಲೀಸ್ ಕಮಿಷನರ್ ಕಚೇರಿಯ ಭ್ರಷ್ಟಾಚಾರದ ಸುದ್ದಿ ಸ್ಫೋಟವಾಗಿತ್ತು ಮತ್ತು ರಚನಾ ಕೊಲೆ ಕೇಸ್ ವ್ಯವಸ್ಥೆಯ ಅತಿ ದೊಡ್ಡ ನಿಗೂಢವಾಗಿ ಉಳಿದುಕೊಂಡಿತ್ತು. ಸಮರ್ಥ್ ಬರೆದ ಪ್ರತಿ ಅಕ್ಷರವೂ ರಕ್ತದ ಹನಿಗಳಂತೆ ಇತಿಹಾಸದಲ್ಲಿ ಉಳಿದವು.

ಕಥೆ ಇನ್ನೂ ಮುಂದುವರೆಯಬೇಕು ಎನ್ನುವವರು ಕಾಮೆಂಟ್ ಬಾಕ್ಸ್ ನಲ್ಲಿ ತಪ್ಪದೇ ತಿಳಿಸಿ.