Shift -00:00: Zero delivery in Kannada Thriller by Danger Writer books and stories PDF | ಶಿಫ್ಟ್ -00:00: ಶೂನ್ಯದ ಡೆಲಿವರಿ

Featured Books
Categories
Share

ಶಿಫ್ಟ್ -00:00: ಶೂನ್ಯದ ಡೆಲಿವರಿ

ಮಂಗಳೂರಿನ ಆ ರಾತ್ರಿ ಎಂದಿನಂತಿರಲಿಲ್ಲ. ಮಳೆ ಸುರಿಯುತ್ತಿರಲಿಲ್ಲ, ಆದರೆ ಗಾಳಿಯಲ್ಲಿ ಒಂದು ತೇವಾಂಶವಿತ್ತು. ಅದು ಮನುಷ್ಯನ ಬೆವರಿನಂತೆ ಜಿಗುಟಾಗಿತ್ತು. ಸಂದೀಪ್ ತನ್ನ RTRT ಬೈಕ್ ಮೇಲೆ ಕುಳಿತು ಮೊಬೈಲ್ ಸ್ಕ್ರೀನ್ ನೋಡುತ್ತಿದ್ದ. ರಾತ್ರಿ ಹನ್ನೊಂದು ಗಂಟೆ ಐವತ್ತೊಂಬತ್ತು ನಿಮಿಷ. ಇಡೀ ದಿನ ಡೆಲಿವರಿ ಮಾಡಿ ಅವನ ಮೈ ಕೈ ನೋಯುತ್ತಿದ್ದವು. ಇನ್ನೇನು ಆ್ಯಪ್ ಆಫ್ ಮಾಡಿ ಮನೆಗೆ ಹೋಗಿ ಮಲಗಬೇಕು, ಆ ಅಸಡ್ಡೆಯ ಜಗತ್ತಿನಿಂದ ದೂರಾಗಬೇಕು ಅಂದುಕೊಳ್ಳುತ್ತಿದ್ದಾಗಲೇ ಅವನ ಫೋನ್ ವಿಚಿತ್ರವಾಗಿ ವೈಬ್ರೇಟ್ ಆಗಲು ಶುರು ಮಾಡಿತು.
ಅದು ಆ್ಯಪ್‌ನ ನೋಟಿಫಿಕೇಶನ್ ಅಲ್ಲ, ಬದಲಾಗಿ ಯಾರೋ ಫೋನ್ ಅನ್ನು ಒಳಗಿನಿಂದ ಚುಚ್ಚಿದಂತೆ ಸದ್ದು ಕೇಳಿಸಿತು. ಸ್ಕ್ರೀನ್ ಮೇಲೆ ಒಂದು ವಾಟ್ಸಾಪ್ ಮೆಸೇಜ್ ಮೂಡಿತು. ಕಳುಹಿಸಿದವರು ಅನಿರ್ಬಾನ್ ಚಟರ್ಜಿ. 
ಮೆಸೇಜ್: ಹಸಿದಿದ್ದೇನೆ ಸಂದೀಪ್. ಪಾರ್ಸೆಲ್ ನಿನ್ನ ಬೈಕ್ ಬಾಕ್ಸ್‌ನಲ್ಲಿದೆ. ವಿಳಾಸ: ಹೈವೆ ರಸ್ತೆ ಬರುವ ಕಾಡಿನ ಮಧ್ಯೆ ಇರುವ ಆ ಕೈಬಿಟ್ಟ ಮರಳು ಗಣಿ.
ಸಂದೀಪ್‌ಗೆ ತಲೆ ಗಿರ್ ಎನ್ನತೊಡಗಿತು. ನಾನು ಯಾವುದೇ ಹೋಟೆಲ್‌ಗೆ ಹೋಗಿಲ್ಲ, ಆರ್ಡರ್ ಎಕ್ಸೆಪ್ಟ್ ಮಾಡಿಲ್ಲ, ಅನಿರ್ಬಾನ್ ಯಾರು? ಎಂದು ಯೋಚಿಸುತ್ತಾ ಬೈಕ್‌ನ ಹಿಂದಿನ ಬಾಕ್ಸ್ ತೆರೆದ. ಅವನ ಎದೆ ನಡುಗಿತು. ಅಲ್ಲಿ ಬಿಸಿಬಿಸಿ ಅನ್ನ ಮತ್ತು ಮೀನಿನ ಸಾರಿನ ವಾಸನೆ ಬರುತ್ತಿತ್ತು. ಅದು ಕೇವಲ ಆಹಾರವಲ್ಲ, ಅದು ಸಂದೀಪ್ ತನ್ನ ಬಾಲ್ಯದಲ್ಲಿ ಅನುಭವಿಸಿದ ಅದೇ ರುಚಿಯ ವಾಸನೆ, ಯಾರು, ಯಾವಾಗ ಅವನ ಬೈಕ್‌ನೊಳಗೆ ಇದನ್ನು ಇಟ್ಟರು? ಇದು ಇಂಪಾಸಿಬಲ್, ಆದರೆ ಕಣ್ಣೆದುರಿಗಿನ ಸತ್ಯ.
ಅವನು ಫೋನ್ ಸ್ವಿಚ್ ಆಫ್ ಮಾಡಲು ಹೋದಾಗ ಅನಿರ್ಬಾನ್‌ನಿಂದ ಇನ್ನೊಂದು ಮೆಸೇಜ್ ಬಂತು ಲಾಜಿಕ್ ಹುಡುಕಬೇಡ ಸಂದೀಪ್. ನೀನು ಬರೆಯುವ ಕಥೆಗಳಲ್ಲಿ ಯಾವತ್ತಾದರೂ ಲಾಜಿಕ್ ಇತ್ತಾ? ಡೆಲಿವರಿ ಮಾಡು, ಇಲ್ಲದಿದ್ದರೆ ನಿನ್ನ ನೆನಪುಗಳು ಡಿಲೀಟ್ ಆಗುತ್ತವೆ
ಸಂದೀಪ್ ಬೈಕ್ ಸ್ಟಾರ್ಟ್ ಮಾಡಿದ. ಈ ಬಾರಿ ಹ್ಯಾಂಡಲ್ ಅವನ ಕಂಟ್ರೋಲ್‌ನಲ್ಲಿರಲಿಲ್ಲ. ಬೈಕ್ ತಾನಾಗಿಯೇ ಉಳ್ಳಾಲದ ಕತ್ತಲ ಹಾದಿಯಲ್ಲಿ ನುಗ್ಗಿತು. ದಾರಿಯಲ್ಲಿ ಅವನಿಗೆ ಆ ವಿಚಿತ್ರ ದೃಶ್ಯ ಕಂಡಿತು. ಒಂದು ಬೃಹತ್ ಆನೆ ನಾಲ್ಕು ಚಕ್ರದ ಗಾಡಿಯನ್ನು ತನ್ನ ಬೆನ್ನ ಮೇಲೆ ಹೊತ್ತುಕೊಂಡು ಮೌನವಾಗಿ ಸಾಗುತ್ತಿತ್ತು. ಆ ಗಾಡಿಯ ಒಳಗೆ ಹಿಂದಿನ ರಾತ್ರಿ ಕನಸಿನಲ್ಲಿ ಸಂದೀಪ್ ಕಂಡಿದ್ದ ಆ ಮುಖವಿಲ್ಲದ ಐದಾರು ಜನ ಡ್ಯಾನ್ಸರ್ ಹುಡುಗಿಯರು ಕುಳಿತಿದ್ದರು. ಅವರು ಕೈ ಬೀಸಿ ಸಂದೀಪ್‌ನನ್ನು ಕರೆಯುತ್ತಿದ್ದರು. ಆನೆಯ ಕಣ್ಣುಗಳು ಪೂರ್ತಿ ಬಿಳಿಯಾಗಿದ್ದವು, ಅದರ ಪ್ರತಿ ಹೆಜ್ಜೆಯೂ ಭೂಮಿಯನ್ನೇ ನಡುಗಿಸುತ್ತಿತ್ತು.
ಸಂದೀಪ್ ಬೈಕ್ ವೇಗ ಹೆಚ್ಚಿಸಿದ. ಆದರೆ ಅವನು ಎಷ್ಟು ವೇಗವಾಗಿ ಹೋದರೂ ಆ ಆನೆ ಅವನ ಪಕ್ಕದಲ್ಲೇ ಇತ್ತು. ಆನೆಯ ಮೇಲಿದ್ದ ಒಬ್ಬ ಹುಡುಗಿ ತನ್ನ ಮುಖವಾಡ ಕಳಚಿದಳು. ಅದು ಶ್ರಾವಣಿಯ ಮುಖ, ಆದರೆ ಅವಳ ಕಣ್ಣುಗಳಿಂದ ಬರುತ್ತಿದ್ದದ್ದು ರಕ್ತವಲ್ಲ, ಬದಲಾಗಿ ಕಪ್ಪು ಶಾಯಿ. ಅವಳು ಕಿರುಚುತ್ತಾ ಹೇಳಿದಳು, ಸಂದೀಪ್, ಈ ಆರ್ಡರ್ ನಿನ್ನ ಸಾವಿನ ನೆನಪಿಗಾಗಿ. 
ಸಂದೀಪ್ ಮರಳು ಗಣಿಯ ಹತ್ತಿರ ತಲುಪಿದಾಗ ಅಲ್ಲಿ ಫೋನ್‌ನ ಸಿಗ್ನಲ್ ಪೂರ್ತಿ ಮಾಯವಾಗಿತ್ತು. ಕತ್ತಲೆಯಲ್ಲಿ ಒಬ್ಬ ವ್ಯಕ್ತಿ ಸಿಗರೇಟ್ ಸೇದುತ್ತಾ ಕುಳಿತಿದ್ದ. ಅವನ ಸುತ್ತಲೂ ಸಾವಿರಾರು ಹಳೆಯ ಹಸ್ತಪ್ರತಿಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದವು. ಸಂದೀಪ್ ಪಾರ್ಸೆಲ್ ಹಿಡಿದು ಅವನ ಹತ್ತಿರ ಹೋದ.
ಅನಿರ್ಬಾನ್ ಚಟರ್ಜಿ ಅಂದರೆ ನೀವೇನಾ? ಎಂದು ಸಂದೀಪ್ ಕೇಳಿದಾಗ, ಆ ವ್ಯಕ್ತಿ ತಿರುಗಿದ. ಅವನ ಮುಖ ಸಂದೀಪ್‌ನ ಮುಖದಂತೆಯೇ ಇತ್ತು, ಆದರೆ ಅವನು ಸುಮಾರು 80 ವರ್ಷದ ಮುದುಕನಂತೆ ಕಾಣುತ್ತಿದ್ದ. ಸಂದೀಪ್, ಈ ಪಾರ್ಸೆಲ್ ಒಳಗಿರುವುದು ಆಹಾರವಲ್ಲ. ಇದು ನೀನು ಬರೆದ  ಕಥೆಗಳಲ್ಲಿ ಸತ್ತುಹೋದ ಪಾತ್ರಗಳ ಆಕ್ರೋಶ. ನೀನು ಈ ಮಣ್ಣಿನ ಮೇಲೆ ಆ ಸಾರನ್ನು ಸುರಿಯಬೇಕು0ಎಂದ ಅನಿರ್ಬಾನ್. ಸಂದೀಪ್ ಪಾರ್ಸೆಲ್ ಓಪನ್ ಮಾಡಿ ಮಣ್ಣಿನ ಮೇಲೆ ಸುರಿದ. ತಕ್ಷಣ ಆ ಮಣ್ಣಿನೊಳಗಿಂದ ನೂರಾರು ಕೈಗಳು ಮೇಲೆ ಬಂದವು. ಆ ಕೈಗಳು ಸಂದೀಪ್‌ನ ಬೈಕ್ ಅನ್ನು ಎಳೆದುಕೊಳ್ಳಲು ಶುರು ಮಾಡಿದವು. ಅನಿರ್ಬಾನ್ ನಗುತ್ತಾ ಹೇಳಿದ, ಸಂದೀಪ್, ನೀನು ಈ ಕಥೆಯನ್ನು ಈಗಷ್ಟೇ ಮುಗಿಸಿದ್ದೀಯಾ. ಈಗ ಓದುಗರು ನಿನ್ನನ್ನು ಈ ಮಣ್ಣಿನೊಳಗೆ ಹುಡುಕುತ್ತಾರೆ. ನೀನು ಕೇವಲ ಒಂದು ಅಕ್ಷರವಾಗಿದ್ದೀಯಾ ಅಷ್ಟೇ. 
ಸಂದೀಪ್ ಅಲ್ಲಿಂದ ತಪ್ಪಿಸಿಕೊಳ್ಳಲು ತನ್ನ RTRT ಬೈಕ್ ಹತ್ತಿದ. ಆದರೆ ಬೈಕ್‌ನ ಚಕ್ರಗಳು ಮನುಷ್ಯರ ಕಣ್ಣುಗಳಂತೆ ತಿರುಗುತ್ತಿದ್ದವು. ಅವನು ಮಂಗಳೂರಿನ ಬಂದರಿನ ಹತ್ತಿರ ಬಂದಾಗ ಅಲ್ಲಿ ಇಡೀ ನಗರವೇ ಕಣ್ಮರೆಯಾಗಿತ್ತು. ಕೇವಲ ಒಂದು ದೊಡ್ಡ ಕನ್ನಡಿ ಅಲ್ಲಿ ನಿಂತಿತ್ತು. ಆ ಕನ್ನಡಿಯಲ್ಲಿ ಸಂದೀಪ್‌ಗೆ ಶ್ರಾವಣಿ  ಮತ್ತು ಅವನ ಬಾಕ್ಸಿಂಗ್ ಬ್ಯಾಗ್ ಕಾಣುತ್ತಿತ್ತು. ಆದರೆ ಅವರೆಲ್ಲರೂ ಕಪ್ಪು ಅಕ್ಷರಗಳಾಗಿ ಕರಗುತ್ತಿದ್ದರು.
ಅನಿರ್ಬಾನ್ ಅಲ್ಲಿಗೆ ಬಂದು ಹೇಳಿದ, ಸಂದೀಪ್, ನೀನು ಈ ಕಥೆಯನ್ನು ಪದೇ ಪದೇ ಓದಿಸುವಂತೆ ಮಾಡಬೇಕು ಅಂದುಕೊಂಡಿದ್ದೆ ಅಲ್ವಾ? ಈಗ ನೋಡು, ನಿನ್ನ ಓದುಗರು ಈ ಕಥೆಯೊಳಗೆ ಬಂದಿಯಾಗಿದ್ದಾರೆ. ಈ ಕಥೆಯನ್ನು ಓದಿ ಮುಗಿಸಿದ ಕ್ಷಣ ಅವರ ಫೋನ್‌ನ ಕ್ಯಾಮೆರಾ ಅವರನ್ನೇ ಶೂಟ್ ಮಾಡಲು ಶುರು ಮಾಡುತ್ತದೆ. ಇದು ನಿಜವಾದ ಡೇಂಜರ್.
ಸಂದೀಪ್ ಸಡನ್ನಾಗಿ ಎದ್ದು ಕುಳಿತ. ಅವನು ಯಾವುದೋ ಪಾಳುಬಿದ್ದ ಹೋಟೆಲ್‌ನ ಮುಂದೆ ಮಲಗಿದ್ದ. ಅಪ್ಪಾ, ಕನಸು ಎಂದು ಅವನು ತಲೆಯೆತ್ತಿ ನೋಡಿದ. ಆದರೆ ಬೈಕ್‌ನ ಮೇಲೆ ಒಬ್ಬ ವೃದ್ಧ ಬಂಗಾಳಿ ವ್ಯಕ್ತಿ ಕುಳಿತಿದ್ದ. ಅವನ ಕೈಯಲ್ಲಿ ಸಂದೀಪ್‌ನ ಮೊಬೈಲ್ ಇತ್ತು.
ಸಂದೀಪ್ ಸರ್, ಈ ಕಥೆ ಚೆನ್ನಾಗಿದೆ. ಆದರೆ ಕ್ಲೈಮ್ಯಾಕ್ಸ್‌ನಲ್ಲಿ ನೀವು ಸಾಯುವುದು ಬೇಡ, ನಿಮ್ಮನ್ನು ಬರೆಯುವವನೇ ಸಾಯಬೇಕು" ಎಂದ ಆ ವ್ಯಕ್ತಿ. ಸಂದೀಪ್ ಗಾಬರಿಯಿಂದ ತನ್ನ ಫೋನ್ ಕಸಿದುಕೊಂಡ. ಅಲ್ಲಿ ವಾಟ್ಸಾಪ್ ಗ್ರೂಪ್ ಓಪನ್ ಆಗಿತ್ತು. ಆ ಗ್ರೂಪ್‌ನ ಹೆಸರು The Writer's Grave.
ಗ್ರೂಪ್‌ನಲ್ಲಿ ಕೊನೆಯ ಮೆಸೇಜ್ ಸಂದೀಪ್‌ನಿಂದಲೇ ಬಂದಿತ್ತು ನಾನು ಈಗ ಕಥೆಯನ್ನು ಓದುತ್ತಿಲ್ಲ, ಕಥೆಯೇ ನನ್ನನ್ನು ತಿನ್ನುತ್ತಿದೆ. ಸಂದೀಪ್ ಕನ್ನಡಿ ನೋಡಿದಾಗ ಅವನ ಹಿಂದೆ ಆ ಆನೆ ಬಂದು ನಿಂತಿತ್ತು. ಆನೆಯ ಮೇಲಿದ್ದ ಆ ಡ್ಯಾನ್ಸರ್ ಹುಡುಗಿಯರು ಸಂದೀಪ್‌ನ ಹೆಸರನ್ನು ಬಾಂಗ್ಲಾ ಭಾಷೆಯಲ್ಲಿ ಕೂಗುತ್ತಿದ್ದರು.
ಮರುದಿನ ಮಂಗಳೂರಿನ ಪತ್ರಿಕೆಯಲ್ಲಿ ಒಂದು ಸುದ್ದಿ ಬಂತು. RTRT ಬೈಕ್ ಮತ್ತು ಡೆಲಿವರಿ ಬ್ಯಾಗ್ ಅನಾಥವಾಗಿ ಪತ್ತೆ. ಬ್ಯಾಗ್ ಒಳಗೆ 217 ಕಥೆಗಳಿದ್ದ ಒಂದು ಡೈರಿ ಇತ್ತು. ಆ ಡೈರಿಯ ಕೊನೆಯ ಪುಟದಲ್ಲಿ ಓದುಗರ ಹೆಸರುಗಳನ್ನು ರಕ್ತದಲ್ಲಿ ಬರೆಯಲಾಗಿತ್ತು.