Mr. Ego in Kannada Thriller by Danger Writer books and stories PDF | ಮಿ.ಈಗೋ

Featured Books
Categories
Share

ಮಿ.ಈಗೋ

ಉಡುಪಿಯ ಆ ಮಧ್ಯಾಹ್ನದ ಬಿಸಿಲು ಎಷ್ಟಿತ್ತೆಂದರೆ, ರಸ್ತೆಯ ಮೇಲೆ ನಡೆದಾಡುವ ಪ್ರತಿಯೊಬ್ಬ ವ್ಯಕ್ತಿಯ ನೆರಳು ಕೂಡ ಬಿಸಿಗೆ ಬೇಸತ್ತು ಅವರ ಕಾಲಿನ ಕೆಳಗೆ ಅಡಗಿಕೊಳ್ಳಲು ಪ್ರಯತ್ನಿಸುತ್ತಿತ್ತು. ಇಂತಹ ಬೇಸಿಗೆಯಲ್ಲೂ ನಮ್ಮ ಕಥೆಯ ನಾಯಕ ಈಶ್ವರ್ ಗೌಡ ಅಲಿಯಾಸ್ ಈಗೋ ತನ್ನ ಕೆಂಪು ಬಣ್ಣದ ಸ್ಕೂಟರ್ ಏರಿ ಅತ್ಯಂತ ಸ್ಟೈಲಿಶ್ ಆಗಿ ಹೋಗುತ್ತಿದ್ದ. ಈಶ್ವರ್‌ಗೆ ತನ್ನ ಮೇಲೆ ತನಗಿರುವ ನಂಬಿಕೆ ಎಂಥದ್ದು ಎಂದರೆ, ಒಮ್ಮೆ ದಾರಿಯಲ್ಲಿ ಹೋಗುವಾಗ ನಾಯಿಯೊಂದು ಇವನನ್ನು ನೋಡಿ ಬೊಗಳಿದರೆ, ಇವನು ಗಾಡಿ ನಿಲ್ಲಿಸಿ ಆ ನಾಯಿಯ ಕಣ್ಣಲ್ಲಿ ಕಣ್ಣಿಟ್ಟು ನಿನಗೆ ನನ್ನ ಪವರ್ ಏನು ಅಂತ ಗೊತ್ತಿಲ್ಲ, ಸುಮ್ಮನೆ ಬಾಯಿ ಮುಚ್ಚು ಎಂದು ಅದಕ್ಕೂ ಈಗೋ ತೋರಿಸುವ ವ್ಯಕ್ತಿ. ಇವನ ಪ್ರಕಾರ, ಈ ಜಗತ್ತಿನಲ್ಲಿ ಎರಡು ತರಹದ ಮನುಷ್ಯರಿದ್ದಾರೆ ಒಂದು ಈಶ್ವರ್ ಗೌಡ, ಇನ್ನೊಂದು ತಪ್ಪು ಮಾಡುವವರು.
ಆದರೆ ಅಂದು ಈಶ್ವರ್ ಕೈಯಲ್ಲೊಂದು ವಿಚಿತ್ರವಾದ ಪಾರ್ಸೆಲ್ ಇತ್ತು. ಅದರ ಮೇಲೆ ಅಕ್ಷರಗಳು ರಕ್ತದ ಬಣ್ಣದಲ್ಲಿ ಬರೆಯಲ್ಪಟ್ಟಿದ್ದವು ಜಾಗ್ರತೆ ಈ ಪಾರ್ಸೆಲ್ ನಿಮ್ಮ ಈಗೋಗೆ ಸವಾಲು ಹಾಕಲಿದೆ. ಈಶ್ವರ್ ನಕ್ಕ. ನನ್ನ ಈಗೋಗೆ ಸವಾಲಾ? ಇದನ್ನ ಕಳುಹಿಸಿದವನು ಯಾವನೋ ಪೆದ್ದ ಇರಬೇಕು ಅಂದುಕೊಳ್ಳುತ್ತಾ ಪಾರ್ಸೆಲ್‌ನಲ್ಲಿ ಬರೆದಿದ್ದ ವಿಳಾಸವನ್ನು ಹುಡುಕುತ್ತಾ ಹೋದ. ಆ ವಿಳಾಸ ಇವನನ್ನು ಕರೆದೊಯ್ದದ್ದು ಉಡುಪಿಯ ಹೊರವಲಯದಲ್ಲಿರುವ ಅತ್ಯಂತ ಹಳೆಯ, ಪಾಳುಬಿದ್ದ ಬಂಗಲೆಯ ಮುಂದೆ. ಆ ಬಂಗಲೆಯ ಹೆಸರು ಮಾಯಾ ಲೋಕ ಗೇಟ್ ಹತ್ತಿರ ಕಾವಲುಗಾರನೊಬ್ಬ ಕುಳಿತಿದ್ದ, ಅವನ ಮುಖವೇ ಒಂದು ವಿಚಿತ್ರ ಸಸ್ಪೆನ್ಸ್ ಸಿನೆಮಾದ ಪೋಸ್ಟರ್‌ನಂತಿತ್ತು. ಈಶ್ವರ್ ಹೋಗಿ ಹೇಯ್, ಇಲ್ಲಿ ಯಾರೋ ಎಸ್‌ಪಿ (SP) ಅಂತ ಇದ್ದಾರಂತೆ ಅವರಿಗೆ ಈ ಪಾರ್ಸೆಲ್ ಕೊಡಬೇಕು ಅಂದ. ಕಾವಲುಗಾರ ಒಂದು ಕ್ಷಣ ಈಶ್ವರ್‌ನನ್ನು  ನೋಡಿ, ಸ್ವಾಮಿ, ಎಸ್‌ಪಿ ಅಂದ್ರೆ ಇಲ್ಲಿ Super Psycho ಅಂತ ಅರ್ಥ ನೀವು ಒಳಗೆ ಹೋಗಿ ಸುಮ್ಮನೆ ಪಾರ್ಸೆಲ್ ಇಟ್ಟು ಬನ್ನಿ, ಅವರ ಕಣ್ಣಿಗೆ ಮಾತ್ರ ಬೀಳಬೇಡಿ ಎಂದು ಎಚ್ಚರಿಸಿದ.
ಈಶ್ವರ್‌ಗೆ ಈ ಮಾತು ಕೇಳಿ ಮೈ ಉರಿಯಿತು. ನನಗೇ ಎಚ್ಚರಿಕೆ ಕೊಡ್ತೀಯಾ? ನಾನು ಯಾರು ಗೊತ್ತಾ? ಸಸ್ಪೆನ್ಸ್ ನ್ನೇ ಮೀರಿಸೋ ಬುದ್ಧಿವಂತ ನಾನು ಎಂದು ಜಿದ್ದಿಗೆ ಬಿದ್ದವನಂತೆ ಆ ಬಂಗಲೆಯ ಒಳಗೆ ಹೆಜ್ಜೆ ಇಟ್ಟ. ಬಂಗಲೆಯ ಒಳಗೆ ಕಾಲಿಡುತ್ತಿದ್ದಂತೆ ವಾತಾವರಣ ಪೂರ್ತಿ ಬದಲಾಯಿತು. ಹೊರಗೆ ಸುಡುತ್ತಿದ್ದ ಬಿಸಿಲು ಮಾಯವಾಗಿ, ಒಳಗಡೆ ಮೈ ನಡುಗಿಸುವಂತಹ ಚಳಿ ಶುರುವಾಯಿತು. ಗೋಡೆಯ ಮೇಲೆ ಹಳೆಯ ಗಡಿಯಾರವೊಂದು ನಿಧಾನವಾಗಿ ಟಿಕ್ ಟಿಕ್ ಎನ್ನುತ್ತಿತ್ತು. ಎದುರುಗಡೆ ದೊಡ್ಡದಾದ ಹಜಾರದಲ್ಲಿ ಒಬ್ಬಳು ಯುವತಿ ಬಿಳಿ ಬಣ್ಣದ ಉಡುಪು ಧರಿಸಿ ಕುಳಿತಿದ್ದಳು. ಅವಳು ಇವನನ್ನು ನೋಡಿ ಕಿರುನಗೆ ಬೀರಿದಳು. ಬನ್ನಿ ಮಿ. ಈಗೋ, ನೀವು ಬರ್ತೀರಾ ಅಂತ ನನಗೆ ಗೊತ್ತಿತ್ತು ಅಂದಳು. ಈಶ್ವರ್ ಶಾಕ್ ಆದ. ನನ್ನ ಹೆಸರು ನಿನಗೆ ಹೇಗೆ ಗೊತ್ತು? ಅಂತ ಕೇಳಿದ. ಅವಳು ಕೈಯಲ್ಲಿದ್ದ ಒಂದು ಸಣ್ಣ ಚೀಟಿಯನ್ನು ತೋರಿಸಿದಳು. ಅದರಲ್ಲಿ ಈಶ್ವರ್ ಇವತ್ತು ಬೆಳಿಗ್ಗೆ ತಿಂದ ಉಪಾಹಾರದ ಮೆನು ಕೂಡ ಇತ್ತು. 
ನನ್ನ ಹೆಸರು ರಮ್ಯ ಆದ್ರೆ ಇಲ್ಲಿ ಎಲ್ಲರೂ ನನ್ನನ್ನು ASP ಅಂತ ಕರೆಯುತ್ತಾರೆ ಅಂದಳು. ಈಶ್ವರ್ ತಕ್ಷಣ ನಕ್ಕ, ಓಹೋ Always Special Person ಅಂತಾನಾ? ರಮ್ಯ ಗಂಭೀರವಾಗಿ ತಲೆ ಅಲ್ಲಾಡಿಸಿ, ಅಲ್ಲ Always Secretly Planning ನಾನು ಯಾವತ್ತೂ ಏನೋ ಒಂದು ಸೀಕ್ರೆಟ್ ಪ್ಲಾನ್ ಮಾಡ್ತಾ ಇರ್ತೀನಿ ಅಂದಳು. ಈ ಮಾತು ಕೇಳಿ ಈಶ್ವರ್‌ಗೆ ಒಂದು ಕ್ಷಣ ನಗು ಬಂತು, ಮತ್ತೊಂದು ಕ್ಷಣ ಬೆನ್ನುಮೂಳೆಯಲ್ಲಿ ಚಳಿ ಹರಿಯಿತು. ಇವನ ಅತಿಯಾದ ಅಹಂಕಾರ ಇವನನ್ನು ಅಲ್ಲಿಂದ ಓಡಿ ಹೋಗಲು ಬಿಡಲಿಲ್ಲ. ನೋಡಿ ಎಎಸ್‌ಪಿ ಮೇಡಂ, ನಾನು ಯಾವ ಪ್ಲಾನ್‌ಗಳಿಗೂ ಹೆದರೋನಲ್ಲ. ಈ ಪಾರ್ಸೆಲ್ ನಿಮ್ಮ ಬಾಸ್‌ಗೆ ಸೇರಬೇಕಂತೆ ಎಂದು ಪಾರ್ಸೆಲ್ ಮೇಜಿನ ಮೇಲಿಟ್ಟ. ಆದರೆ ರಮ್ಯ ಆ ಪಾರ್ಸೆಲ್ ಮುಟ್ಟಲೂ ಇಲ್ಲ. ಅದನ್ನ ನೀವೇ ಓಪನ್ ಮಾಡಿ ಮಿ. ಈಗೋ. ನಿಮ್ಮ ಈಗೋ ಅಂದ್ರೆ ನನಗಿಷ್ಟ. ನಿಮ್ಮ ಈಗೋನೇ ಇವತ್ತು ನಿಮ್ಮನ್ನ ಇಲ್ಲಿಗೆ ಕರೆದುಕೊಂಡು ಬಂದಿರೋದು ಅಂದಳು.
ಈಶ್ವರ್ ಜಿದ್ದಿಗೆ ಬಿದ್ದು ಪಾರ್ಸೆಲ್ ಬಿಚ್ಚಿದ. ಒಳಗೆ ಇದ್ದದ್ದು ಒಂದು ಹಳೆಯ ಕನ್ನಡಿ ಇದಕ್ಕಾ ಇಷ್ಟೊಂದು ಬಿಲ್ಡಪ್ ಕೊಟ್ಟಿದ್ದು? ಎಂದು ಕನ್ನಡಿಯತ್ತ ಮುಖ ಮಾಡಿದ ಈಶ್ವರ್‌ಗೆ ತಲೆ ಗಿರ್ ಅಂದಿತು. ಕನ್ನಡಿಯಲ್ಲಿ ಕಾಣುತ್ತಿರುವುದು ಇವನ ಮುಖವಲ್ಲ, ಬದಲಿಗೆ ಒಬ್ಬ ಮುಖವಾಡ ಧರಿಸಿದ ವ್ಯಕ್ತಿ ಆ ವ್ಯಕ್ತಿ ಕನ್ನಡಿಯಲ್ಲಿ ನಿಂತು ಇವನನ್ನೇ ನೋಡಿ ಅಟ್ಟಹಾಸದಿಂದ ನಗುತ್ತಿದ್ದ. ಸಂದೀಪ್ ಎಂದು ಆ ಕನ್ನಡಿಯೊಳಗಿನ ವ್ಯಕ್ತಿ ಕರೆಯಲು ಶುರುಮಾಡಿದ. ಈಶ್ವರ್‌ಗೆ ಅಚ್ಚರಿಯಾಯಿತು, ನನ್ನ ಹೆಸರು ಈಶ್ವರ್ ಗೌಡ, ಈ ಸಂದೀಪ್ ಯಾರು? ಎಂದು ಕೂಗಿದ. ಅಷ್ಟರಲ್ಲಿ ಬಂಗಲೆಯ ಲೈಟ್ಸ್‌ಗಳೆಲ್ಲಾ ಆರಿ ಹೋದವು. ಕತ್ತಲಲ್ಲಿ ಯಾವುದೋ ಶಕ್ತಿ ಇವನನ್ನ ಎಳೆದಾಡಿದಂತಾಯಿತು. ರಮ್ಯ ಎಲ್ಲೋ ಮರೆಯಾಗಿದ್ದಳು. ಈಶ್ವರ್‌ಗೆ ಅಸಲಿ ಭಯ ಶುರುವಾಯಿತು. ಅವನ ಅಹಂಕಾರವೆಲ್ಲಾ ಗಾಳಿಯಲ್ಲಿ ತೂರಿ ಹೋಗಿತ್ತು.
ಯಾರಿದ್ದೀರಾ ಅಲ್ಲಿ? ಎಂದು ಕೂಗಿದಾಗ, ದೂರದಲ್ಲಿ ಒಂದು ಬೆಳಕು ಕಾಣಿಸಿತು. ಅಲ್ಲಿ ಒಬ್ಬ ವ್ಯಕ್ತಿ ಕುಳಿತಿದ್ದ. ಹತ್ತಿರ ಹೋಗಿ ನೋಡಿದರೆ, ಆ ವ್ಯಕ್ತಿ ಮತ್ಯಾರೋ ಅಲ್ಲ, ಸ್ವತಃ ಈಶ್ವರ್ ಗೌಡನೇ ಅಂದರೆ ಕನ್ನಡಿಯಲ್ಲಿ ಕಂಡಿದ್ದ ಮುಖವಾಡ ಈಗ ಅಲ್ಲಿ ಕೂತಿತ್ತು. ಆ ವ್ಯಕ್ತಿ ನಿಧಾನವಾಗಿ ಮುಖವಾಡ ತೆಗೆದ. ಅದುವೇ ಸಂದೀಪ್ ಹೌದು, ಒಬ್ಬ ಬರಹಗಾರ ಅಲ್ಲಿ ಕುಳಿತು ಏನೋ ಬರೆಯುತ್ತಿದ್ದ. ಸಂದೀಪ್, ಯಾರು ನೀನು? ನಾನು ಈ ಕಥೆಯ ಹೀರೋ ಅಲ್ವಾ? ಎಂದು ಈಶ್ವರ್ ಕೇಳಿದ. ಸಂದೀಪ್ ನಗುತ್ತಾ ಅಂದ, "ನೀನು ನನ್ನ ಈಗೋನಿಂದ ಹುಟ್ಟಿದ ಒಂದು ಪಾತ್ರ ಮಾತ್ರ. ನಿನ್ನ ಈ ಅಹಂಕಾರದಿಂದಲೇ ಈ ಕಥೆ ಸಸ್ಪೆನ್ಸ್ ಆಗಿದೆ. ಆದರೆ ಈ ಕಥೆಯ ಅಂತ್ಯ ನನ್ನ ಕೈಯಲ್ಲಿದೆ. ಈಶ್ವರ್‌ಗೆ ತನ್ನ ಅಸ್ತಿತ್ವವೇ ಇಲ್ಲವಾಗುತ್ತಿದೆ ಅನಿಸಿತು. ಅಷ್ಟರಲ್ಲಿ ಜೋರಾಗಿ ಒಂದು ಶಬ್ದವಾಯಿತು. ಸಂದೀಪ್ ಎದ್ದೇಳಪ್ಪ, ಫೋನ್ ರಿಂಗ್ ಆಗ್ತಾ ಇದೆ ಈಶ್ವರ್ ಕಣ್ಣು ಬಿಟ್ಟು ನೋಡಿದ. ಅವನು ತನ್ನ ಮನೆಯ ಸೋಫಾದ ಮೇಲೆ ಮಲಗಿದ್ದ. ಮೈಯೆಲ್ಲಾ ಬೆವತು ಹೋಗಿತ್ತು. ಎದುರುಗಡೆ ಅವನ ಅಪ್ಪ ನಿಂತಿದ್ದರು. ಏನೋ ಸಂದೀಪ್, ಕನಸಿನಲ್ಲಿ ಈಗೋ ಈಗೋ ಅಂತ ಕೂಗ್ತಾ ಇದ್ದೆ? ಅಂದರು. ಸಂದೀಪ್ ಉಸಿರು ಜೋರಾಗಿ ಬಿಡುತ್ತಾ, ಅಪ್ಪಾ, ಒಂದು ಭೀಕರವಾದ ಕಥೆ ಬರಿತಾ ಇದ್ದೆ, ಆ ಕಥೆಯ ಪಾತ್ರವೇ ನನ್ನನ್ನು ನುಂಗಿ ಹಾಕೋಕೆ ಬಂದಿತ್ತು. ಅಂದ. ಅಪ್ಪ ನಗುತ್ತಾ, ಸರಿ ಸರಿ, ASP ಮೇಡಂ ಫೋನ್ ಮಾಡ್ತಿದ್ದಾರೆ ನೋಡು, ನಿನ್ನ exercise ಟೈಮ್ ಚೇಂಜ್ ಆಗಿದೆ ಎಂದರು.
ಸಂದೀಪ್ ಫೋನ್ ಎತ್ತಿ ನೋಡಿದಾಗ ASP ಮೇಡಂ ವರ ಮೆಸೇಜ್ ಇತ್ತು ಬೆಳಿಗ್ಗೆ 9.30ಕ್ಕೆ ಬನ್ನಿ, ಮರೆಯಬೇಡಿ ಮಿ. ಈಗೋ . ಸಂದೀಪ್‌ಗೆ ಆಶ್ಚರ್ಯವಾಯಿತು. ASP ಮೇಡಂವರಿಗೆ  ಅವನು ಈ ಕಥೆ ಬರೆಯುತ್ತಿರುವುದು ಗೊತ್ತಿರಲಿಲ್ಲ, ಆದರೂ ಅವರು ಅವನನ್ನು ಮಿ. ಈಗೋ ಎಂದು ಕರೆದಿದ್ದರು. ಅವನು ನಿಟ್ಟುಸಿರು ಬಿಟ್ಟು, ಟೇಬಲ್ ಮೇಲಿದ್ದ ತನ್ನ ನೋಟ್ ಬುಕ್ ನೋಡಿದ. ಅದರಲ್ಲಿ ಮಿ. ಈಗೋ  ಕಥೆಯ ಶೀರ್ಷಿಕೆಯ ಕೆಳಗೆ ಒಂದು ಸಾಲು ಹೊಸದಾಗಿ ಸೇರ್ಪಡೆಯಾಗಿತ್ತು ಈಗೋ ಯಾವತ್ತೂ ಸಾಯಲ್ಲ, ಅದು ಕೇವಲ ಮುಖವಾಡ ಬದಲಿಸುತ್ತೆ.  ಸಂದೀಪ್ ಕಿಟಕಿಯ ಹೊರಗೆ ನೋಡಿದಾಗ, ದೂರದ ಹಳೆ ಬಂಗಲೆಯೊಂದರ ಮೇಲೆ ಒಬ್ಬಳು ಯುವತಿ ಕೈ ಬೀಸುತ್ತಿರುವಂತೆ ಭಾಸವಾಯಿತು. ಅದು ಭ್ರಮೆಯೋ ಅಥವಾ ಅವನ ಕಥೆಯ ASP ನಿಜವಾಗಿಯೂ ಅಲ್ಲಿ ಅಡಗಿದ್ದಾಳೆಯೋ?