Time vortex in Kannada Thriller by Danger Writer books and stories PDF | ಸಮಯದ ಸುಳಿ

Featured Books
Categories
Share

ಸಮಯದ ಸುಳಿ

ಮಂಗಳೂರಿನ ಹೊರವಲಯದ ಆ ಕರಾವಳಿ ತೀರದಲ್ಲಿ ನಿಂತಿದ್ದ ಆ ಬಂಗಲೆ, ಕೇವಲ ಒಂದು ಕಟ್ಟಡವಾಗಿರಲಿಲ್ಲ. ಅದು ಕಾಲಚಕ್ರದ ಸುಳಿಯಲ್ಲಿ ಸಿಲುಕಿ ನರಳುತ್ತಿದ್ದ ಒಂದು ಜೀವಂತ ಪ್ರೇತಲೋಕದಂತಿತ್ತು. ಮಳೆಯ ಆರ್ಭಟಕ್ಕೆ ಸಮುದ್ರದ ಅಲೆಗಳು ಬಂಗಲೆಯ ತಳಹದಿಗೆ ಅಪ್ಪಳಿಸುವಾಗ ಉಂಟಾಗುವ ಸದ್ದು, ಯಾವುದೋ ಸಾವಿರಾರು ಆತ್ಮಗಳು ಏಕಕಾಲಕ್ಕೆ ಆಕ್ರಂದನ ಮಾಡುತ್ತಿರುವಂತೆ ಇಡೀ ಪರಿಸರವನ್ನು ನಡುಗಿಸುತ್ತಿತ್ತು. ಸಂದೀಪ್ ಬಂಗಲೆಯ ಆ ಬೃಹತ್ ಹಜಾರದಲ್ಲಿ ಒಬ್ಬನೇ ನಿಂತಿದ್ದ. ಅವನ ಕೈಯಲ್ಲಿದ್ದ ಟಾರ್ಚ್‌ನ ಕಿರಣಗಳು ಧೂಳು ಮತ್ತು ಜೇಡರ ಬಲೆಗಳಿಂದ ಆವೃತವಾಗಿದ್ದ ಗೋಡೆಗಳ ಮೇಲೆ ಬಿದ್ದಾಗ, ಅಲ್ಲಿದ್ದ ಹಳೆಯ ಭಾವಚಿತ್ರಗಳು ಜೀವ ತಳೆದು ಅವನನ್ನೇ ಗುರಾಯಿಸುತ್ತಿರುವಂತೆ ಭಾಸವಾಗುತ್ತಿತ್ತು. ಆ ಹಳೆಯ ಫ್ರೇಮ್‌ಗಳ ಒಳಗಿದ್ದ ಕಣ್ಣುಗಳು ಅವನ ಪ್ರತಿ ನಡೆಯನ್ನೂ ಹಿಂಬಾಲಿಸುತ್ತಿದ್ದವು.
ಅವನ ಬಲಗೈ ಮಣಿಕಟ್ಟಿನ ಮೇಲೆ ತಾನೇ ಬರೆದುಕೊಂಡಿದ್ದ 222 ಸಂಖ್ಯೆ ಈಗ ವಿಚಿತ್ರವಾಗಿ ಕೆಂಪಗೆ ಮಿನುಗತೊಡಗಿತು. ಅದರ ಸುತ್ತಲಿನ ಚರ್ಮ ಸುಟ್ಟ ಗಾಯದಂತೆ ಉರಿಯುತ್ತಿತ್ತು, ರಕ್ತದ ಬಣ್ಣದ ಆ ಸಂಖ್ಯೆ ಸಂದೀಪ್‌ನ ನಾಡಿಬಡಿತಕ್ಕೆ ತಕ್ಕಂತೆ ಮಿಡಿಯುತ್ತಿತ್ತು. ಈ ಸಂಖ್ಯೆಗಳು ಅವನಿಗೆ ಕೇವಲ ಅಂಕಿಗಳಾಗಿರಲಿಲ್ಲ ಅವು ಅವನ ಬದುಕನ್ನು ಬೇಟೆಯಾಡುತ್ತಿರುವ ಬೇಟೆಗಾರರಾಗಿದ್ದವು. ಹತ್ತು ವರ್ಷಗಳ ಹಿಂದೆ, ಸಂದೀಪ್ ತನ್ನ ಮೊದಲ ಹಾರರ್ ಕಥೆಯ ಕ್ಲೈಮ್ಯಾಕ್ಸ್ ಬರೆಯಲು ಕುಳಿತಿದ್ದಾಗ, ಅವನ ಮನೆಯ ಹಳೆಯ  ಗಡಿಯಾರ ಸರಿಯಾಗಿ ರಾತ್ರಿ 1:11 ಕ್ಕ್ಕೆ ಸ್ತಬ್ಧವಾಗಿತ್ತು. ಅಂದು ಅವನು ಸೃಷ್ಟಿಸಿದ ಕಥೆಯ ನಾಯಕ ಮರಣ ಹೊಂದಿದ್ದಷ್ಟೇ ಅಲ್ಲ, ಸಂದೀಪ್‌ನ ಜೀವನದ ನೆಮ್ಮದಿಯೂ ಅಂದೇ ಸಮಾಧಿಯಾಗಿತ್ತು. ಅಂದಿನಿಂದ ಅವನು ಬರೆದ ಪ್ರತಿ  ಕಥೆಗಳ ಕೊನೆಯ ಪುಟದಲ್ಲೂ ಈ ಸಂಖ್ಯೆಗಳು ರಕ್ತದ ಕಲೆಯಂತೆ ಅಂಟಿಕೊಂಡಿದ್ದವು.
ಸಂದೀಪ್ ಮೆಲ್ಲಗೆ ಮೇಲ್ಮಹಡಿಗೆ ಹೋಗುವ ಹಳೆಯ ಮರದ ಮೆಟ್ಟಿಲುಗಳ ಮೇಲೆ ಕಾಲಿಟ್ಟ. ಪ್ರತಿ ಹೆಜ್ಜೆಗೂ ಆ ಮರ ಮುರಿಯುವಂತೆ ಕಿರುಚುತ್ತಿತ್ತು, ಆ ಶಬ್ದ ಇಡೀ ಬಂಗಲೆಯಲ್ಲಿ ದಿಗಿಲಿನ ಪ್ರತಿಧ್ವನಿ ಎಬ್ಬಿಸುತ್ತಿತ್ತು. ಮೆಟ್ಟಿಲ ತಿರುವಿನಲ್ಲಿ ನಿಂತಿದ್ದ ಬೃಹತ್ ಕನ್ನಡಿಯ ಮೇಲೆ ಮಂಜು ಮುಸುಕಿತು. ಸಂದೀಪ್ ಟಾರ್ಚ್ ಬಿಟ್ಟು ನೋಡಿದಾಗ ಅವನ ಉಸಿರು ನಿಂತಂತಾಯಿತು. ಕನ್ನಡಿಯ ಒಳಗೆ ಯಾವುದೋ ಅದೃಶ್ಯ ಹಸ್ತ ರಕ್ತದಲ್ಲಿ 111 ಎಂದು ಬರೆಯುತ್ತಿತ್ತು. ಸಂದೀಪ್‌ಗೆ ಗೊತ್ತು, ಇದು ಸಾವಿನ ಮೊದಲ ಕರೆ. ಬಾಕ್ಸಿಂಗ್ ರಿಂಗ್‌ನಲ್ಲಿ ಅದೆಂತಹುದೇ ಬಲಿಷ್ಠ ಎದುರಾಳಿಯ ಪಂಚ್‌ಗಳಿಗೂ ಕಣ್ಣು ಮಿಟುಕಿಸದ ಸಂದೀಪ್, ಇಂದು ಈ ಶೂನ್ಯದಲ್ಲಿರುವ ಅದೃಶ್ಯ ಶಕ್ತಿಯ ಮುಂದೆ ನಡುಗುತ್ತಿದ್ದ. ಅವನ ಕಿವಿಯ ಹಿಂದೆ ಯಾರೋ ಅತಿ ತಣ್ಣಗೆ ಉಸಿರಾಡಿದ ಅನುಭವವಾಯಿತು. ಯಾರು ಅಲ್ಲಿ? ಎಂದು ಕಿರುಚಿದ ಸಂದೀಪ್ ತಿರುಗಿ ನೋಡಿದಾಗ ಯಾರೂ ಇರಲಿಲ್ಲ. ಆದರೆ ನೆಲದ ಮೇಲೆ ಹಸಿ ಪಾದದ ಗುರುತುಗಳು ಮೆಲ್ಲನೆ ಅವನ ಕಡೆಗೆ ಬರುತ್ತಿರುವುದು ಟಾರ್ಚ್ ಬೆಳಕಿನಲ್ಲಿ ಕಂಡಿತು. ಆ ಪಾದದ ಗುರುತುಗಳು ಮನುಷ್ಯನದ್ದಾಗಿರದೆ, ಯಾವುದೋ ವಿಕೃತ ಪ್ರಾಣಿಯದ್ದಾಗಿದ್ದವು. 
ಬಂದೇ ಬಿಟ್ಟೆಯಾ ಸಂದೀಪ್? ನಿನ್ನ ಸ್ವಂತ ಕ್ಲೈಮ್ಯಾಕ್ಸ್ ಅನುಭವಿಸಲು ಸಿದ್ಧನಾಗು ಎಂಬ ಭೀಕರ ಕರ್ಕಶ ಧ್ವನಿ ಬಂಗಲೆಯ ಮೂಲೆ ಮೂಲೆಯಿಂದ ಪ್ರತಿಧ್ವನಿಸಿತು. ಸಂದೀಪ್ ತನ್ನ ಕೈಯನ್ನು ಬಿಗಿಗೊಳಿಸಿದ. ಇದು ಕೇವಲ ದೈಹಿಕ ಹೋರಾಟವಲ್ಲ, ಇದು ಅವನ ಆತ್ಮ ಮತ್ತು ಅವನ ಸೃಜನಶೀಲತೆಯ ನಡುವಿನ ಯುದ್ಧವಾಗಿತ್ತು. ಸಮಯ ಈಗ ಸರಿಯಾಗಿ 2:22. ಅಷ್ಟರಲ್ಲೇ ಬಂಗಲೆಯ ಎಲ್ಲಾ ಕಿಟಕಿಗಳು ಏಕಕಾಲಕ್ಕೆ ಬಡಿದುಕೊಳ್ಳಲು ಶುರುಮಾಡಿದವು. ಗಾಳಿಯಲ್ಲಿ ಹಳೆಯ ಕೊಳೆತ ಮೀನಿನ ಮತ್ತು ಸುಟ್ಟ ಮಾಂಸದ ಅಸಹ್ಯಕರ ವಾಸನೆ ಆವರಿಸಿತು. ಗೋಡೆಯ ಮೇಲಿದ್ದ ಒಂದು ದೊಡ್ಡ ಛಾಯಾಚಿತ್ರ ಕೆಳಗೆ ಬಿದ್ದು ಒಡೆಯಿತು. ಚೂರಾದ ಗಾಜಿನ ನಡುವೆ ಕಂಡ ಆ ಮುಖ ಸಂದೀಪ್‌ನದ್ದೇ ಆಗಿತ್ತು. ಆದರೆ ಆ ಚಿತ್ರದಲ್ಲಿ ಅವನ ಕಣ್ಣುಗಳಿಂದ ರಕ್ತ ಸುರಿಯುತ್ತಿತ್ತು. ಸಂದೀಪ್ ಬೆವರುತ್ತಾ, ಉಸಿರು ಕಟ್ಟುವಂತಿದ್ದ ವಾತಾವರಣದಲ್ಲಿ ಮೇಲ್ಮಹಡಿಯ ಕೊನೆಯ ಕೊಠಡಿಗೆ ನುಗ್ಗಿದ. ಅಲ್ಲಿನ ಮೇಜಿನ ಮೇಲೆ ಅವನದೇ ಹಳೆಯ ಡೈರಿ ತೆರೆದಿತ್ತು. ವಿಚಿತ್ರವೆಂದರೆ, ಅವನು ಬರೆಯದ ಸಾಲುಗಳು ಅಲ್ಲಿ ಮೂಡಿದ್ದವು 333 ಕಾಣಿಸಿದಾಗ, ನಿನ್ನ ಅಕ್ಷರಗಳು ನಿನ್ನನ್ನೇ ನುಂಗುತ್ತವೆ. ನೀನು ಸೃಷ್ಟಿಸಿದ ಪ್ರತಿಯೊಂದು ಪಾತ್ರವೂ ನಿನ್ನ ಬಲಿಗಾಗಿ ಕಾಯುತ್ತಿದೆ. ಸಂದೀಪ್‌ಗೆ ಆಘಾತವಾಯಿತು. ತಾನು ಇಷ್ಟು ವರ್ಷ ಬರೆದ ನೋವು, ಸಾವು ಮತ್ತು ದಿಗಿಲು ಈಗ ರೂಪ ಪಡೆದು ತನ್ನನ್ನೇ ಕೊಲ್ಲಲು ಬಂದಿವೆ ಎಂದು ಅವನಿಗೆ ಅರಿವಾಯಿತು.
ಇದ್ದಕ್ಕಿದ್ದಂತೆ ಬಂಗಲೆಯ ಕೆಳಗಿದ್ದ ಹಳೆಯ ಗಡಿಯಾರ ಜೋರಾಗಿ ಶಬ್ದ ಮಾಡತೊಡಗಿತು. ಟಕ್. ಟಕ್. ಟಕ್. ಮೂರು ಬಾರಿ ಬಾರಿಸಿದ ಆ ಶಬ್ದ ಸಾವು ಹತ್ತಿರ ಬಂದಿದೆ ಎಂಬ ಮುನ್ಸೂಚನೆಯಾಗಿತ್ತು. ಸಮಯ ಈಗ ಸರಿಯಾಗಿ 3:33.
ಬಂಗಲೆಯ ಕತ್ತಲ ಮೂಲೆಯಿಂದ ಕಪ್ಪು ನೆರಳುಗಳು ಹರಿದು ಬರತೊಡಗಿದವು. ಅವುಗಳಿಗೆ ಮುಖವಿರಲಿಲ್ಲ, ಆದರೆ ಅವುಗಳಿಂದ ಹೊರಬರುತ್ತಿದ್ದ ಆಕ್ರಂದನ ಸಂದೀಪ್ ಸೃಷ್ಟಿಸಿದ ಪಾತ್ರಗಳದ್ದಾಗಿತ್ತು. ಸಂದೀಪ್ ತನ್ನ ಪೂರ್ತಿ ಶಕ್ತಿ ಬಳಸಿ ಒಂದು ನೆರಳಿಗೆ ಪಂಚ್ ನೀಡಿದ, ಆದರೆ ಅವನ ಕೈ ಶೂನ್ಯವನ್ನು ಸೀಳಿ ಗೋಡೆಗೆ ಬಡಿಯಿತು. ಆ ನೆರಳುಗಳು ಅವನನ್ನು ಸುತ್ತುವರಿದು ಅವನ ಕಿವಿಯಲ್ಲಿ ಪಿಸುಗುಟ್ಟತೊಡಗಿದವು ಸಂದೀಪ್, ಲೇಖಕನಿಗೆ ತನ್ನ ಪಾತ್ರಗಳ ಕೈಯಲ್ಲೇ ಸಾವು ಬರೆಯುವುದು ಅತಿ ದೊಡ್ಡ ಕಲೆಯಲ್ಲವೇ?
ಸಂದೀಪ್‌ನ ಕೈಮೇಲಿದ್ದ 222 ಸಂಖ್ಯೆ ಈಗ ಮಾಯವಾಗಿ, ಚರ್ಮವನ್ನು ಸೀಳಿ 333 ಎಂಬ ಸಂಖ್ಯೆ ರಕ್ತದ ಹನಿಗಳ ಜೊತೆ ಮೇಲೆ ಬಂದಿತು. ಅವನಿಗೆ ಉಸಿರಾಡಲು ಗಾಳಿ ಸಿಗದಂತಾಯಿತು. ಬಂಗಲೆಯ ನೆಲದ ಮರಗಳು ಕುಸಿಯತೊಡಗಿದವು. ಕೆಳಗೆ ಸಮುದ್ರದ ಹಸಿದ ಅಲೆಗಳು ಅವನನ್ನು ನುಂಗಲು ಬಾಯಿ ತೆರೆದು ಕಾಯುತ್ತಿದ್ದವು. ಸಂದೀಪ್‌ಗೆ ಅರ್ಥವಾಯಿತು, ಇದು ಕೇವಲ ಅಂಕಿಗಳ ಆಟವಲ್ಲ ಇದು ಅವನ ಕಲ್ಪನೆಯೇ ಸೃಷ್ಟಿಸಿದ ಒಂದು ಸುಳಿ. 
ಸಂದೀಪ್ ತನ್ನ ಜೇಬಿನಲ್ಲಿದ್ದ ಲೇಖನಿಯನ್ನು ಕಷ್ಟಪಟ್ಟು ಹೊರತೆಗೆದ. ರಕ್ತ ಸೋರುತ್ತಿದ್ದ ಮಣಿಕಟ್ಟಿನಿಂದಲೇ ಅಲ್ಲಿನ ಬಿಳಿ ಗೋಡೆಯ ಮೇಲೆ ಏನೋ ಬರೆಯಲು ಆರಂಭಿಸಿದ. ಅವನು ಬರೆದ ಪ್ರತಿ ಅಕ್ಷರವೂ ದಿವ್ಯವಾಗಿ ಮಿನುಗತೊಡಗಿತು. ನನ್ನ ಅಕ್ಷರಗಳು ಸಾಯುವುದಿಲ್ಲ ಎಂದು ಅವನು ಅರಚಿದ ಕ್ಷಣ ಇಡೀ ಬಂಗಲೆ ಭೀಕರ ಸ್ಫೋಟದೊಂದಿಗೆ ಸಮುದ್ರದ ಆಳಕ್ಕೆ ಕುಸಿಯಿತು. ಮರುದಿನ ಬೆಳಿಗ್ಗೆ ತೀರದಲ್ಲಿ ಸಿಕ್ಕಿದ್ದು ಕೇವಲ ಒಂದು ಅರ್ಧ ಸುಟ್ಟ ಡೈರಿ. ಅದರ ಕೊನೆಯ ಪುಟದಲ್ಲಿ ಕೆಂಪು ಅಕ್ಷರಗಳಲ್ಲಿ ಬರೆಯಲಾಗಿತ್ತು ನನ್ನ ಅಕ್ಷರಗಳು ಸಾಯುವುದಿಲ್ಲ, ಅವು ಪ್ರತಿ ದಿನ ಬೆಳಿಗ್ಗೆ 3:33ಕ್ಕೆ ಕತ್ತಲೆಯಲ್ಲಿ ಮತ್ತೆ ಹುಟ್ಟುತ್ತವೆ.