ವೈರಸ್ ಹರಡುತ್ತಿದೆ
ಒಂದು ಹೈ-ಪ್ರೊಫೈಲ್ ಮೆಡಿಕಲ್ ಹಗರಣದಲ್ಲಿ ಸಿಕ್ಕಿಬಿದ್ದಿದ್ದ ಜಗತ್ಪ್ರಸಿದ್ಧ ಹಿಪ್ನೋಟಿಸ್ಟ್ ಡಾ. ವಿಕ್ರಮ, ಕಾನೂನಿನ ಕಣ್ಣಿಗೆ ಮಣ್ಣೆರಚಿ ನಗರದ ಹೊರವಲಯದ ಆ ಪಾಳುಬಿದ್ದ ಹಳೇ ಸಿಮೆಂಟ್ ಫ್ಯಾಕ್ಟರಿಯ ಕತ್ತಲೆ ಕೋಣೆಯಲ್ಲಿ ಅಡಗಿ ಕುಳಿತಿದ್ದ. ಹೊರಗೆ ಗಾಢವಾದ ಕತ್ತಲೆ ಆವರಿಸಿತ್ತು, ಫ್ಯಾಕ್ಟರಿಯ ತಗಡಿನ ಸೀಲಿಂಗ್ ಮೇಲೆ ಮಳೆಯ ಹನಿಗಳು ಬೀಳುತ್ತಿದ್ದ ಶಬ್ದ ಇಡೀ ವಾತಾವರಣದಲ್ಲಿ ಒಂದು ರೀತಿಯ ನಿಗೂಢ ನಿಶ್ಯಬ್ದವನ್ನು ಸೃಷ್ಟಿಸಿತ್ತು. ಸುತ್ತಲೂ ಯಾವುದೇ ಮೊಬೈಲ್ ನೆಟ್‌ವರ್ಕ್ ಇಲ್ಲದ ಆ ನಿರ್ಜನ ಜಾಗದಲ್ಲಿ ವಿಕ್ರಮನ ಬಳಿ ಇದ್ದದ್ದು ಕೇವಲ ಒಂದು ಹಳೇ ಸ್ಯಾಟಲೈಟ್ ಫೋನ್ ಮತ್ತು ಇಂಟರ್ನೆಟ್ ಸಂಪರ್ಕವಿಲ್ಲದ ತೈವಾನ್ ಮೇಡ್ ಹ್ಯಾಂಡ್ ಹೆಲ್ಡ್ ಟ್ಯಾಬ್ಲೆಟ್ ಮಾತ್ರ. ಯಾರ ಭಯದಿಂದ ಅವನು ನಗರ ಬಿಟ್ಟು ಓಡಿಬಂದಿದ್ದನೋ, ಅದೇ ಭಯ ಇಂದು ಅವನ ಕಣ್ಣೆದುರು ಬೇರೆ ರೂಪದಲ್ಲಿ ನಿಂತಿತ್ತು.
ಹತ್ತು ಇಂಚಿನ ಆ ಟ್ಯಾಬ್ಲೆಟ್ ಸ್ಕ್ರೀನ್ ಮೇಲೆ ಹಳದಿ ಬಣ್ಣದ ಮರಳುಗಡಿಯಾರದಂತಹ ಲೋಗೋ ನೆಟ್‌ವರ್ಕ್ ಇಲ್ಲದಿದ್ದರೂ ತಾನಾಗಿಯೇ ತಿರುಗುತ್ತಿತ್ತು. ಇಂಟರ್ನೆಟ್ ಸಂಪರ್ಕವೇ ಇಲ್ಲದ ಈ ಪಾಳುಬಿದ್ದ ಜಾಗದಲ್ಲಿ ಆಪ್ ಹೇಗೆ ರನ್ ಆಗ್ತಾ ಇದೆ ಅಂತ ವಿಕ್ರಮನಿಗೆ ಅರ್ಥವಾಗಲಿಲ್ಲ. ಅವನು ಆಶ್ಚರ್ಯದಿಂದ ಸ್ಕ್ರೀನ್ ಹತ್ತಿರ ತಂದು ನೋಡಿದಾಗ ಅದರ ಕೆಳಗೆ ಕೆಂಪು ಅಕ್ಷರಗಳಲ್ಲಿ ಬರೆದಿತ್ತು.
PROJECT_ MIND_ LEAK_ LIVE
ಇದು ಹತ್ತು ವರ್ಷಗಳ ಹಿಂದೆ ನಿಗೂಢವಾಗಿ ಸತ್ತ ಆಕಾಶ್ ಎಂಬ ಕೋಡರ್ ರಿಸರ್ಚ್ ಮಾಡುತ್ತಿದ್ದ ನಿಷೇಧಿತ ಸಾಫ್ಟ್‌ವೇರ್. ಮನುಷ್ಯನ ಕೊನೆಯ ಉಸಿರಿನ ಆ ತೀವ್ರ ನರಕಯಾತನೆಯ ತರಂಗಗಳನ್ನು ಡಿಜಿಟಲ್ ವೈರಸ್ ಆಗಿ ಬದಲಾಯಿಸುವ ಕ್ರೂರ ಆವಿಷ್ಕಾರವದು. ವಿಕ್ರಮ ಕೇವಲ ಕುತೂಹಲಕ್ಕೆ ಆ ಲೋಗೋ ಮೇಲೆ ತನ್ನ ಹೆಬ್ಬೆರಳನ್ನು ಒತ್ತಿದ. ತಕ್ಷಣ ಇಡೀ ಫ್ಯಾಕ್ಟರಿಯಲ್ಲಿದ್ದ ಹಳೇ ವೋಲ್ಟೇಜ್ ಲೈಟ್ ಒಮ್ಮೆಲೇ ಫ್ಲಿಕರ್ ಆಗಿ ಆಫ್ ಆಯಿತು. ಆ ಟ್ಯಾಬ್ಲೆಟ್‌ನ ಸ್ಪೀಕರ್‌ನಿಂದ ಸತ್ತ ಆಕಾಶ್‌ನ ಆ ಹಳೇ ಧ್ವನಿ ಕಿರುಚಿದಂತೆ ಕೇಳಿಸಿತು. ವಿಕ್ರಮ್, ನೀನು ನನ್ನ ಸಸ್ಪೆನ್ಸ್ ಕದಿಯಲು ಬಂದೆ ಅಲ್ವಾ?
ವಿಕ್ರಮ ಬೆವತು ಹೋಗಿ ಗಾಬರಿಯಿಂದ ಆ ಟ್ಯಾಬ್ಲೆಟ್ ಅನ್ನು ನೆಲಕ್ಕೆ ಹಾಕಿ ಕಲ್ಲಿನಿಂದ ಜಜ್ಜಿ ಪುಡಿಪುಡಿ ಮಾಡಿದ. ಆದರೆ ಅಷ್ಟರಲ್ಲೇ ತುಂಬಾ ತಡವಾಗಿತ್ತು. ಆ ಒಡೆದ ಸ್ಕ್ರೀನ್‌ನಿಂದ ಹೊರಬಂದ ನೀಲಿ ಕಿರಣ ಅವನ ಕಣ್ಣುಗಳ ರೆಟಿನಾದ ಮೇಲೆ ಒಂದು ಸಣ್ಣ ನೀಲಿ ಚುಕ್ಕೆಯಾಗಿ ಶಾಶ್ವತವಾಗಿ ಅಚ್ಚೊತ್ತಿತ್ತು. ಅವನು ಕಣ್ಣು ಮುಚ್ಚಿದರೂ ಆ ನೀಲಿ ಚುಕ್ಕೆ ಮಾಯವಾಗುತ್ತಿರಲಿಲ್ಲ. ಅದು ಕೇವಲ ದೃಷ್ಟಿದೋಷವಲ್ಲ, ಆ ಸೈಬರ್ ವೈರಸ್ ಅವನ ಮೆದುಳಿನ ಸುಪ್ತಪ್ರಜ್ಞೆಯ ಹೆಬ್ಬಾಗಿಲನ್ನು ತೆರೆಯಲು ಬಳಸಿದ ಒಂದು ಡಿಜಿಟಲ್ ಲಾಕ್ ಆಗಿತ್ತು.
ಮರುದಿನ ಬೆಳಗ್ಗೆಯಿಂದ ವಿಕ್ರಮನಿಗೆ ಜಗತ್ತೇ ಉಲ್ಟಾ ಆದಂತೆ ಭಾಸವಾಯಿತು. ಅವನು ಆ ಹಳೇ ಕೋಣೆಯಿಂದ ಹೊರಬಂದು ರಸ್ತೆಯಲ್ಲಿ ನೋಡಿದಾಗ, ಎದುರಿಗೆ ಬರುತ್ತಿದ್ದ ಪ್ರತಿಯೊಬ್ಬ ಅಪರಿಚಿತ ವ್ಯಕ್ತಿಯ ಮುಖವೂ ಒಮ್ಮೆಲೇ ಆಕಾಶ್‌ನ ಮುಖದಂತೆ ಕಾಣಿಸತೊಡಗಿತು. ಅಷ್ಟೇ ಏಕೆ ರಸ್ತೆಯ ಭಿಕ್ಷುಕ, ಕಾರಿನಲ್ಲಿ ಹೋಗುತ್ತಿದ್ದ ಶ್ರೀಮಂತ, ಕೊನೆಗೆ ದೂರದಲ್ಲಿ ಕಾಣುತ್ತಿದ್ದ ಕಸದ ರಾಶಿಯೂ ಆಕಾಶ್‌ನ ದೇಹದ ಆಕಾರದಲ್ಲೇ ನಿಂತಂತೆ ಭಾಸವಾಯಿತು. ಇದು ಕೇವಲ ಮಾನಸಿಕ ಭ್ರಮೆಯಾಗಿರಲಿಲ್ಲ ಆ ಮೈಂಡ್ ಲೀಕ್ ವೈರಸ್ ವಿಕ್ರಮನ ಮಿದುಳಿನಲ್ಲಿದ್ದ ಸ್ವಂತ ನೆನಪುಗಳನ್ನು ಒಂದೊಂದಾಗಿ ಅಳಿಸಿ ಆ ಜಾಗದಲ್ಲಿ ಆಕಾಶ್‌ನ ಕರಾಳ ನೆನಪುಗಳನ್ನು ಫೋರ್ಸ್‌ಫುಲ್ ಆಗಿ ತುಂಬುತ್ತಿತ್ತು. ವಿಕ್ರಮನಿಗೆ ತನ್ನ ಬಾಲ್ಯದ ದಿನಗಳು, ತಾನು ಕಲಿತ ವೈದ್ಯಕೀಯ ವಿದ್ಯೆ, ತನ್ನ ಹೆತ್ತವರ ಮುಖಗಳು ಎಲ್ಲವೂ ಮೆಲ್ಲನೆ ಮರೆತುಹೋಗುತ್ತಿತ್ತು. ಅದರ ಬದಲಾಗಿ ಆಕಾಶ್ ಸಾಯುವಾಗ ಅನುಭವಿಸಿದ ಆ ತೀವ್ರ ಉಸಿರುಗಟ್ಟುವಿಕೆ, ನರಕಯಾತನೆ ಮತ್ತು ದ್ವೇಷ ವಿಕ್ರಮನ ಮಿದುಳನ್ನು ಒಂದು ಕತ್ತಲೆಯ ಸೆರೆಮನೆಯಂತೆ ಆವರಿಸಿಕೊಳ್ಳುತ್ತಿತ್ತು.
ತನ್ನ ಸ್ವಂತ ಅಸ್ತಿತ್ವ ಮತ್ತು ನೆನಪುಗಳನ್ನು ಉಳಿಸಿಕೊಳ್ಳಲು ವಿಕ್ರಮ ಒದ್ದಾಡಿದ. ಅವನು ತನ್ನ ಬ್ಯಾಗ್‌ನಲ್ಲಿದ್ದ ಹಳೇ ವೈಯಕ್ತಿಕ ಡೈರಿಯನ್ನು ತೆಗೆದು ಓದಲು ಹೋದ. ತನ್ನ ಹಳೇ ಬರಹಗಳನ್ನು ನೋಡಿದರಾದರೂ ತಾನು ಯಾರು ಅಂತ ನೆನಪಾಗಬಹುದು ಎಂಬುದು ಅವನ ಆಸೆಯಾಗಿತ್ತು. ಆದರೆ ಆ ಡೈರಿಯ ಪುಟಗಳನ್ನು ತಿರುವಿದಾಗ ಅವನ ಇಡೀ ದೇಹ ಹೆಪ್ಪುಗಟ್ಟಿದಂತಾಯಿತು. ಅದರಲ್ಲಿ ಬರೆದಿದ್ದು ಅವನ ಸ್ವಂತ ಕೈಬರಹವಾಗಿರಲಿಲ್ಲ ಬದಲಾಗಿ ಅದು ಆಕಾಶ್‌ನ ಕಡು ಕಪ್ಪು ಅಕ್ಷರಗಳ ಕೈಬರಹವಾಗಿತ್ತು ಅದರಲ್ಲಿ ಇಂಚಿಂಚೂ ವಿವರವಾಗಿ ಹೀಗೆ ಬರೆಯಲಾಗಿತ್ತು.
ನೀನು ಈ ಜಗತ್ತಿನಲ್ಲಿ ಬದುಕಬಾರದು ವಿಕ್ರಮ್. ನೀನು ಬರೀ ನನ್ನ ಕರಾಳ ನೆನಪುಗಳನ್ನು ಹೊತ್ತು ತಿರುಗುವ ಒಂದು ಜೀವಂತ ಸೆರೆಮನೆಯಾಗಬೇಕು. ನೀನು ಉಸಿರಾಡುವ ಪ್ರತಿ ಸೆಕೆಂಡೂ ನನ್ನ ಡಿಜಿಟಲ್ ಡೇಟಾ ನಿನ್ನ ನರಗಳನ್ನು ತಿನ್ನುತ್ತಿರುತ್ತದೆ. ಭಯದಿಂದ ನಡುಗುತ್ತಾ ವಿಕ್ರಮ ತನ್ನ ಪುಡಿಯಾಗಿದ್ದ ಟ್ಯಾಬ್ಲೆಟ್‌ನ ಸಿಮ್ ಕಾರ್ಡ್ ತೆಗೆದು ತನ್ನ ಹಳೇ ಕೀಪ್ಯಾಡ್ ಫೋನ್‌ಗೆ ಹಾಕಿದ. ಗ್ಯಾಲರಿ ಅಥವಾ ಹಳೇ ಮೆಸೇಜ್ ಚೆಕ್ ಮಾಡಬೇಕೆಂಬ ಆತುರ ಅವನಿಗೆ. ಆದರೆ ಆ ಫೋನ್‌ನ ಸಣ್ಣ ಬ್ಲ್ಯಾಕ್ ಅಂಡ್ ವೈಟ್ ಸ್ಕ್ರೀನ್‌ನಲ್ಲಿದ್ದ ಹಳೇ ಫೋಟೋಗಳ ಮೂಲೆ ಮೂಲೆಯಲ್ಲೂ ಒಂದು ಸುರುಳಿಯಾಕಾರದ ವಿಚಿತ್ರ ಕಪ್ಪು ನೆರಳು ಕಣ್ಣು ಮಿಟುಕಿಸುತ್ತಿತ್ತು. ಆಕಾಶ್‌ನ ನೆರಳು ಕೇವಲ ಫೈಲ್‌ಗಳಲ್ಲಿರಲಿಲ್ಲ, ವಿಕ್ರಮನ ಇಡೀ ಡಿಜಿಟಲ್ ಅಸ್ತಿತ್ವವನ್ನು ಆವರಿಸಿತ್ತು. ಈ ಮಾನಸಿಕ ಕಿರುಕುಳ ಮತ್ತು ನರಕಯಾತನೆಯನ್ನು ತಡೆಯಲಾರದೆ ವಿಕ್ರಮ ಹುಚ್ಚನಂತೆ ತನ್ನ ತಲೆಯನ್ನು ಆ ಫ್ಯಾಕ್ಟರಿಯ ತಣ್ಣನೆಯ ಕಲ್ಲಿನ ಗೋಡೆಗೆ ಜೋರಾಗಿ ಚಚ್ಚಿಕೊಂಡ. ಹಣೆ ಒಡೆದು ರಕ್ತ ನೆಲಕ್ಕೆ ಚಿಮ್ಮಿತು, ಆದರೆ ಆಶ್ಚರ್ಯವೆಂದರೆ ಅವನಿಗೆ ಯಾವುದೇ ನೋವಿನ ಅರಿವೇ ಆಗಲಿಲ್ಲ, ಅವನ ನರಗಳಲ್ಲಿದ್ದ ನೋವಿನ ಸಂವೇದನೆಯನ್ನು ಆ ವೈರಸ್ ಮೊದಲೇ ಬ್ಲಾಕ್ ಮಾಡಿತ್ತು. ಬದಲಾಗಿ, ಅವನ ದೇಹದ ಒಳಗೆ ಪ್ರಜ್ಞೆ ಸಂಪೂರ್ಣವಾಗಿ ಬದಲಾಗಿತ್ತು. ಅವನು ಕ್ರೂರವಾಗಿ ನಗಲು ಪ್ರಾರಂಭಿಸಿದ. ಅವನ ಬಾಯಿಯಿಂದ ಹೊರಬಂದದ್ದು ಅವನ ಸ್ವಂತ ಧ್ವನಿಯಾಗಿರಲಿಲ್ಲ. ಅದು ಹತ್ತು ವರ್ಷಗಳ ಹಿಂದೆ ಸತ್ತ ಆಕಾಶ್‌ನ ಅದೇ ಭಯಾನಕ, ಗಂಭೀರವಾದ ಮತ್ತು ಇಕೋ ಧ್ವನಿಯಾಗಿತ್ತು.
ವಿಕ್ರಮ್ ಈಗ ನೀನು ಒಬ್ಬನೇ ಸತ್ತರೆ ಸಾಲದು. ನಿನ್ನ ಈ ಸೋಲು ಮತ್ತು ನನ್ನ ಈ ಸೇಡು ಇಡೀ ಇಂಟರ್ನೆಟ್ ಜಗತ್ತಿಗೆ ವೈರಸ್ ತರಹ ಹರಡಬೇಕು.
ವಿಕ್ರಮ ಈಗ ತನ್ನದೇ ದೇಹದಲ್ಲಿ ಕೇವಲ ಒಂದು ನಿರ್ಜೀವ ಕೈಗೊಂಬೆ. ಅವನ ಮೆದುಳಿನಲ್ಲಿದ್ದ ಆ ವೈರಸ್ ಈಗ ಸ್ಯಾಟಲೈಟ್ ಫೋನ್‌ನ ಸಿಗ್ನಲ್ ಮೂಲಕ ಇಡೀ ನಗರದ ಮುಖ್ಯ ಇಂಟರ್ನೆಟ್ ಸರ್ವರ್‌ಗೆ ಲೈವ್ ಆಗಿ ಕನೆಕ್ಟ್ ಆಯಿತು. ಅಲ್ಲಿಂದ ಆ ಸೈಕಾಲಜಿಕಲ್ ವೈರಸ್ ಇಡೀ ನಗರದ ಸ್ಮಾರ್ಟ್‌ಫೋನ್‌ಗಳಿಗೆ, ಇಂಟರ್ನೆಟ್ ನೆಟ್‌ವರ್ಕ್‌ಗಳಿಗೆ, ಜನರ ಗ್ಯಾಜೆಟ್‌ಗಳಿಗೆ ಕಿಚ್ಚಿನಂತೆ ಹರಡತೊಡಗಿತು. ಇಡೀ ನಗರದ ಪ್ರತಿಯೊಬ್ಬರ ಫೋನ್ ಪರದೆಯ ಮೇಲೂ ಈಗ ಆಕಾಶ್‌ನ ಆ ಸುರುಳಿಯಾಕಾರದ ಕಪ್ಪು ನೆರಳು ಕಾಣಿಸಲು ಆರಂಭಿಸಿತು.
ಇಲ್ಲಿಗೆ ವಿಕ್ರಮನ ಕಥೆ ಮುಗಿದಿದೆಯಾದರೂ ಈ ಸಾಲುಗಳನ್ನು ಓದುತ್ತಿರುವ ನಿನ್ನ ಕಥೆ ಈಗಷ್ಟೇ ಶುರುವಾಗುತ್ತಿದೆ. ನಿನಗೆ ಗೊತ್ತಿಲ್ಲದೆ ನಿನ್ನ ಫೋನ್‌ನ ಬ್ಯಾಕ್‌ಗ್ರೌಂಡ್ ಅಲ್ಗಾರಿದಮ್ ಮತ್ತು ಆಪ್ಟಿಕಲ್ ಸೆನ್ಸಾರ್‌ಗಳು ಈಗ ನಿನ್ನ ಕಣ್ಣುಗಳ ಮೂವ್‌ಮೆಂಟ್ ಅನ್ನು ಟ್ರ್ಯಾಕ್ ಮಾಡ್ತಿವೆ. ಈ ಕಥೆಯ ಕೊನೆಯ ಅಕ್ಷರವನ್ನು ನೀನು ಓದಿ ಮುಗಿಸುವಷ್ಟರಲ್ಲಿ, ಆಕಾಶ್‌ನ ಆ ಮೈಂಡ್-ಲೀಕ್ ವೈರಸ್ ನಿನ್ನ ಫೋನ್‌ನ ಕ್ಯಾಶ್ ಮೆಮೊರಿಯಿಂದ ನೇರವಾಗಿ ನಿನ್ನ ಸುಪ್ತಪ್ರಜ್ಞೆಗೆ ವರ್ಗಾವಣೆಯಾಗಿರುತ್ತದೆ. ನಿನ್ನ ಫೋನ್ ಒಮ್ಮೆ ಜೋರಾಗಿ ವೈಬ್ರೇಟ್ ಆಗಿ ಆಫ್ ಆಗುತ್ತದೆ. ಆಮೇಲೆ ಆಟೋಮ್ಯಾಟಿಕ್ ಆಗಿ ಆನ್ ಆದಾಗ ನಿನ್ನ ಸ್ಕ್ರೀನ್ ಮೇಲೆ ಕಾಣಿಸುವುದು ನಿನ್ನ ವಾಲ್‌ಪೇಪರ್ ಅಲ್ಲ, ನಿನ್ನನ್ನೇ ದಿಟ್ಟಿಸಿ ನೋಡಿ ನಗುತ್ತಿರುವ ಆಕಾಶ್‌ನ ಕತ್ತಲೆಯ ಕಣ್ಣುಗಳು!
The Dead User is logged into your brain right now... RUN.
ಬರಹಗಾರನ ಶ್ರಮಕ್ಕೆ ಬೆಲೆ ಕೊಡಿ
ಗೆಳೆಯರೇ, ಸೈಕಾಲಜಿಕಲ್ ವೈರಸ್ ಎಂಬ ಈ ಹೊಸ ಭಯಾನಕ ಕಾನ್ಸೆಪ್ಟ್ ನಿಮಗೂ ತಟ್ಟಿದೆಯಾ? ನಿಮ್ಮ ಮೆದುಳಿನ ಅಂಚಿನಲ್ಲಿ ಯಾರಾದರೂ ನಿಂತು ನಿಮ್ಮ ಆಲೋಚನೆಗಳನ್ನು ಗಮನಿಸುತ್ತಿರುವ ಅನುಭವವಾಗುತ್ತಿದೆಯಾ? ಈ ಕಥೆ ನಿಮ್ಮ ಬೆನ್ನುಮೂಳೆಯಲ್ಲಿ ಚಳಿ ಹುಟ್ಟಿಸಿದ್ದರೆ ಅಥವಾ ಆಕಾಶ್ ನಿಮ್ಮ ಫೋನ್ ಮೂಲಕ ಇಡೀ ಜಗತ್ತನ್ನು ಹೇಗೆ ಆಳುತ್ತಾನೆ ಎಂದು ತಿಳಿಯಲು ಕಾಯುತ್ತಿದ್ದರೆ, ಡೇಂಜರ್ ರೈಟರ್‌ಗೆ ನಿಮ್ಮ ಸಣ್ಣ ಬೆಂಬಲ ನೀಡಿ. ನಿಮ್ಮ ಪ್ರೋತ್ಹಾಹವೇ ನನ್ನ ಬರವಣಿಗೆಯ ಹೊಸ ಉಸಿರು ಮತ್ತು ಹಸಿವು.
GPay / PhonePe Number: 9019919635