Chemical in Kannada Science-Fiction by Danger Writer books and stories PDF | ಕೆಮಿಕಲ್

Featured Books
Categories
Share

ಕೆಮಿಕಲ್

ಮಂಗಳೂರಿನ ಆ ಹಳೆಯ ಬಂದರಿನ ಮೇಲೆ ಅಂದು ಸುರಿಯುತ್ತಿದ್ದ ಮಳೆ ಸಾಮಾನ್ಯ ನೀರಾಗಿರಲಿಲ್ಲ ಅದು ಇಡೀ ನಗರದ ನೆಮ್ಮದಿಯನ್ನೇ ತೊಳೆದುಹಾಕಲು ಬಂದ ಕರಾಳ ಮುನ್ಸೂಚನೆಯಂತಿತ್ತು. ಕತ್ತಲೆಯ ನಡುವೆ ತನ್ನ RTRT ಬೈಕ್ ಹತ್ತಿ ವೇಗವಾಗಿ ಧಾವಿಸುತ್ತಿದ್ದ ವಿವೇಕ್, ಕೇವಲ ಮೂರು ತಿಂಗಳ ಹಿಂದೆ ಮಂಗಳೂರಿನ ಅತ್ಯಂತ ಪ್ರಭಾವಿ ಮತ್ತು ಯಶಸ್ವಿ ಯುವ ಬರಹಗಾರನಾಗಿದ್ದ. ಅವನ ಲೇಖನಿಯಿಂದ ಮೂಡಿಬರುತ್ತಿದ್ದ ಒಂದೊಂದು ಸಸ್ಪೆನ್ಸ್ ಕಥೆಯೂ ಇಂಟರ್ನೆಟ್ ಲೋಕದಲ್ಲಿ ಬಿರುಗಾಳಿ ಎಬ್ಬಿಸುತ್ತಿದ್ದವು. ಕಥೆ ಬರೆಯುವುದಷ್ಟೇ ಅಲ್ಲ, ಬಾಕ್ಸಿಂಗ್ ರಿಂಗ್‌ನ ಒಳಗೆ ಇಳಿದರೆ ಎದುರಾಳಿಗಳ ಹೆಡೆಮುರಿ ಕಟ್ಟುತ್ತಿದ್ದ ಅಪ್ರತಿಮ ಚಾಂಪಿಯನ್ ಅವನು. ಅವನ ಮೆದುಳಿನಲ್ಲಿ ಹರಿಯುತ್ತಿದ್ದ ಉತ್ಸಾಹದ ರಸಾಯನಿಕಗಳು ಅವನನ್ನು ಸದಾ ಕ್ರಿಯಾಶೀಲವಾಗಿ ಇಡುತ್ತಿದ್ದವು.

ಆದರೆ, ಕಳೆದ ಎರಡು ತಿಂಗಳುಗಳಿಂದ ವಿವೇಕ್‌ನ ಬದುಕಿನಲ್ಲಿ ಎಲ್ಲವೂ ಬದಲಾಗಿಹೋಗಿತ್ತು. ಇದ್ದಕ್ಕಿದ್ದಂತೆ ಅವನ ಲೇಖನಿ ಮೂಕವಾಗಿತ್ತು, ಬರೆಯಲು ಲ್ಯಾಪ್‌ಟಾಪ್ ತೆರೆದರೆ ಕೀಲಿಮಣೆಯ ಮೇಲೆ ಬೆರಳುಗಳು ಹೆಪ್ಪುಗಟ್ಟುತ್ತಿದ್ದವು. ಬಾಕ್ಸಿಂಗ್ ಗ್ಲೌಸ್ ಮುಟ್ಟಿದರೆ ಒಂದು ರೀತಿಯ ಅನಾಮಧೇಯ ಭಯ ಅವನನ್ನು ಕಾಡುತ್ತಿತ್ತು. ಇಡೀ ರಾತ್ರಿ ನಿದ್ದೆಯಿಲ್ಲದೆ ಕತ್ತಲೆ ಕೋಣೆಯ ಗೋಡೆಯನ್ನು ದಿಟ್ಟಿಸುತ್ತಾ, ಕಾರಣವಿಲ್ಲದೆ ಕಣ್ಣೀರು ಹಾಕುವುದು ಅವನ ದಿನಚರಿಯಾಯಿತು.
ಭಯಾನಕ ವಿಷಯವೇನೆಂದರೆ, ವಿವೇಕ್‌ನಿಗೆ ತನ್ನ ದೇಹ ಮತ್ತು ಮೆದುಳಿಗೆ ಒಂದು ಕಾಯಿಲೆ ಅಥವಾ ಸಮಸ್ಯೆ ಬಂದಿದೆ ಎಂಬುದು ಗೊತ್ತೇ ಆಗಿರಲಿಲ್ಲ. ವಿಚಿತ್ರವೆಂದರೆ ಈ ಸಮಸ್ಯೆಯ ಆಗಮನದ ಸುಳಿವು ಸ್ವಲ್ಪವೂ ಇರುವುದಿಲ್ಲ. ಮೆದುಳಿನ ಒಳಗೆ ರಸಾಯನಿಕಗಳು ಸ್ಲೋ ಆದಾಗ ಮನುಷ್ಯ ಮೊದಲು ತನ್ನ ಮೇಲಿನ ನಂಬಿಕೆಯನ್ನೇ ಕಳೆದುಕೊಳ್ಳುತ್ತಾನೆ. ಇದೇ ರೀತಿ ವಿವೇಕ್ ಕೂಡ, ನನ್ನ ಕಲ್ಪನಾ ಶಕ್ತಿ ಮುಗಿದುಹೋಯಿತು, ನಾನೊಬ್ಬ ಸೋತ ಬರಹಗಾರ, ನನ್ನಲ್ಲಿ ಇನ್ನು ಬಾಕ್ಸಿಂಗ್ ಮಾಡುವ ತಾಕತ್ತಿಲ್ಲ, ನಾನೇ ವರ್ತ್‌ಲೆಸ್ ಎಂದು ತನ್ನನ್ನು ತಾನು ಹಗಲು ರಾತ್ರಿ ದೂಷಿಸಿಕೊಳ್ಳುತ್ತಿದ್ದ. ತನಗೆ ಡಿಪ್ರೆಷನ್ ಬಂದಿದೆ ಎಂಬುದಾಗಲಿ ಅವನಿಗೆ ಊಹಿಸಲೂ ಸಾಧ್ಯವಾಗಿರಲಿಲ್ಲ. ಇಡೀ ಮಂಗಳೂರು ನಗರ, ವಿವೇಕ್‌ನ ಬುದ್ಧಿ ಭ್ರಮಣೆಯಾಗಿದೆ, ಅವನು ಹುಚ್ಚನಾಗುತ್ತಿದ್ದಾನೆ ಎಂದು ಪಿಸುಗುಟ್ಟುವಾಗ, ವಿವೇಕ್ ತನ್ನದೇ ತಪ್ಪು ಎಂದುಕೊಂಡು ತೀವ್ರ ಅಪರಾಧ ಪ್ರಜ್ಞೆಯಿಂದ ಆತ್ಮಹತ್ಯೆಯ ಅಂಚಿಗೆ ಬಂದು ನಿಂತಿದ್ದ.

ಆದರೆ ವಿಧಿಯ ಆಟ ಬೇರೆಯೇ ಆಗಿತ್ತು. ಅಂದು ರಾತ್ರಿ 11:30ಕ್ಕೆ ವಿವೇಕ್ ತನ್ನ ಬೈಕ್ ನಿಲ್ಲಿಸಿದ್ದು ಅದೇ ಹಳೆಯ ಬಂದರಿನ ಮೂಲೆಯಲ್ಲಿದ್ದ 'ದೋಸೆ ಕ್ಯಾಂಪ್' ಹೋಟೆಲ್ ಪಕ್ಕದ ಪಾಳುಬಿದ್ದ ಕಟ್ಟಡದ ಮುಂದೆ. ಅವನಿಗೆ ಅದೇ ಸಮಯದಲ್ಲಿ ವಾಟ್ಸಾಪ್‌ನಲ್ಲಿ ಇಶಾನಿ ಎಂಬ ಯುವತಿಯಿಂದ ಒಂದು ಮೆಸೇಜ್ ಬಂದಿತ್ತು. ವಿವೇಕ್, ನೀನು ಹುಚ್ಚನಲ್ಲ, ನಿನ್ನ ಈ ಸ್ಥಿತಿಗೆ ನಿನ್ನ ಹಣೆಬರಹವಾಗಲಿ ಅಥವಾ ನಿನ್ನ ತಪ್ಪಾಗಲಿ ಕಾರಣವಲ್ಲ. ನಿನ್ನ ಮೆದುಳನ್ನು ಹ್ಯಾಕ್ ಮಾಡಿದ್ದಾರೆ. ತಕ್ಷಣ ಇಲ್ಲಿಗೆ ಬಾ.

ವಿವೇಕ್ ಯಾಂತ್ರಿಕವಾಗಿ ಆ ಹಳೆಯ ಕಟ್ಟಡದ ಒಳಗೆ ಹೆಜ್ಜೆ ಇಟ್ಟನು. ಅಲ್ಲಿ ಕತ್ತಲಲ್ಲಿ ಕಣ್ಣು ಬಿಟ್ಟಿರುವ ಮನೆಯೊಂದರ ಒಳಗಿನ ಕೋಣೆಯಲ್ಲಿ ಇಶಾನಿ ಕಂಪ್ಯೂಟರ್ ಸ್ಕ್ರೀನ್ ಮುಂದೆ ಕುಳಿತಿದ್ದಳು. ಅವಳ ಮುಖದಲ್ಲಿ ತೀವ್ರವಾದ ಆತಂಕವಿತ್ತು. ಅವಳು ವಿವೇಕ್‌ನನ್ನು ನೋಡಿ ಮೆಲ್ಲಗೆ ಹೇಳಿದಳು, ವಿವೇಕ್, ನಾನೊಬ್ಬ ಇನ್ವೆಸ್ಟಿಗೇಟಿವ್ ಜರ್ನಲಿಸ್ಟ್. ಕಳೆದ ಒಂದು ವರ್ಷದಿಂದ ನಾನು ಬೆನ್ನತ್ತಿರುವುದು ಒಂದು ಅಂತರಾಷ್ಟ್ರಿಯ ಕ್ರಿಮಿನಲ್ ಗ್ಯಾಂಗ್ ಅನ್ನು. ಆ ಗ್ಯಾಂಗ್‌ನ ಹೆಸರು ಡಾರ್ಕ್ ಸೆಂಟರ್. ಅವರು ಇಡೀ ನಗರದ ಬುದ್ಧಿವಂತ ಮತ್ತು ಯಶಸ್ವಿ ಯುವಕರನ್ನು ಗುರಿಯಾಗಿಸಿಕೊಂಡು ಅವರ ಮೆದುಳನ್ನು ನಾಶ ಮಾಡುತ್ತಿದ್ದಾರೆ.
ವಿವೇಕ್ ತನ್ನ ಒಣಗಿದ ಗಂಟಲಿನಿಂದ ಕೇಳಿದ, ಮೆದುಳನ್ನು ನಾಶ ಮಾಡುವುದೇ ಅಂದರೆ? ಆದ್ರೆ ನನಗೆ ಯಾವುದೇ ಕಾಯಿಲೆ ಬಂದ ಲಕ್ಷಣ ಇರಲಿಲ್ಲ ಇಶಾನಿ ನಾನೇ ಸೋತು ಹೋಗಿದ್ದೆ ಅಷ್ಟೇ.
ಇಶಾನಿ ವಿವೇಕ್‌ನ ಮುಂದೊಂದು ವೈದ್ಯಕೀಯ ವರದಿಯನ್ನು ಇಟ್ಟಳು. ಇದೇ ಈ ಕೆಮಿಕಲ್‌ನ ಕರಾಳ ಆಟ ವಿವೇಕ್, ನಮ್ಮ ಮೆದುಳಿನ ಒಳಗೆ ನಮ್ಮ ಮೂಡ್, ಉತ್ಸಾಹ, ಮತ್ತು ಬೌದ್ಧಿಕ ಶಕ್ತಿಯನ್ನು ನಿಯಂತ್ರಿಸುವ ಕೆಲವು ಪ್ರಮುಖ ಕೆಮಿಕಲ್‌ಗಳು ಇರುತ್ತವೆ. ಅದರಲ್ಲಿ ಸಿರೊಟೋನಿನ್ ನಮ್ಮ ಮನಸ್ಸಿಗೆ ನೆಮ್ಮದಿ ನೀಡಿದರೆ, 'ಡೋಪಮೈನ್' ನಮ್ಮಲ್ಲಿ ಹಠ ಮತ್ತು ಏನನ್ನಾದರೂ ಸಾಧಿಸುವ ಹಂಬಲವನ್ನು ಹುಟ್ಟುಹಾಕುತ್ತದೆ. ಈ ಡಾರ್ಕ್ ಸೆಂಟರ್ ಗ್ಯಾಂಗ್ ಯಾವುದೇ ವಾಸನೆ ಅಥವಾ ರುಚಿ ಇಲ್ಲದ ರಹಸ್ಯ ಕೆಮಿಕಲ್-X ಎಂಬ ದ್ರವವನ್ನು ಕಂಡುಹಿಡಿದಿದ್ದಾರೆ. ನೀನು ದಿನಾ ಸಾಯಂಕಾಲ ಕುಡಿಯುತ್ತಿದ್ದ ಬ್ಲ್ಯಾಕ್ ಕಾಫಿಯಲ್ಲಿ ಆ ಕೆಮಿಕಲ್ ಅನ್ನು ಅವರ ಏಜೆಂಟ್ ಬೆರೆಸುತ್ತಿದ್ದ. ಆ ಕೆಮಿಕಲ್ ಸದ್ದಿಲ್ಲದೆ ನಿನ್ನ ಮೆದುಳಿಗೆ ಹೋಗಿ, ಅಲ್ಲಿ ನ್ಯಾಚುರಲ್ ಆಗಿ ಉತ್ಪತ್ತಿಯಾಗುತ್ತಿದ್ದ ಸಿರೊಟೋನಿನ್ ಮತ್ತು ಡೋಪಮೈನ್ ಅನ್ನು ಕಂಪ್ಲೀಟ್ ಆಗಿ ಲಾಕ್ ಮಾಡಿಬಿಟ್ಟಿದೆ, ನಿನ್ನ ಮೆದುಳಿನಲ್ಲಿ ಕೆಮಿಕಲ್ಸ್ ಉತ್ಪಾದನೆ ಸ್ಲೋ ಆದ ತಕ್ಷಣ ನೀನು ಖಿನ್ನತೆಯ ಕತ್ತಲೆ ಕೂಪಕ್ಕೆ ಜಾರಿದ್ದೀಯಾ. ನಿನಗೆ ಸಮಸ್ಯೆ ಬಂದಿದೆ ಅಂತ ನಿನಗೆ ಗೊತ್ತಾಗದಂತೆ ನಿನ್ನ ಆಲೋಚನಾ ಶಕ್ತಿಯನ್ನೇ ಅದು ಮಲಗಿಸಿಬಿಟ್ಟಿತ್ತು. ಇದು ಕೊಲೆಯಲ್ಲ ವಿವೇಕ್, ಇದು ಮೆದುಳಿನ ಹತ್ಯೆ.

ವಿವೇಕ್‌ನ ಮೆದುಳಿಗೆ ಆ ಮಾತುಗಳು ತಲುಪಿದಾಗ ಅವನಿಗೆ ಇಡೀ ಪ್ರಪಂಚವೇ ಗಿರ್ ಎಂದು ತಿರುಗಿದಂತಾಯಿತು. ಹೌದು, ತಾನು ದಿನಾ ಕಾಫಿ ಕುಡಿದ ನಂತರವೇ ತಲೆಯಲ್ಲಿ ಮಂಜು ಕವಿದಂತೆ  ಆಗುತ್ತಿದ್ದುದು ಅವನಿಗೆ ನೆನಪಾಯಿತು. ತಾನು ಹುಚ್ಚನಲ್ಲ, ತಾನು ಸೋತಿಲ್ಲ, ತನ್ನ ಮೆದುಳಿನ ಜೊತೆ ಯಾರೋ ಆಟವಾಡುತ್ತಿದ್ದಾರೆ ಎಂಬ ಸತ್ಯ ಅರಿವಾದಾಗ ಅವನಲ್ಲೊಂದು ಹೊಸ ಕಿಡಿ ಮೂಡಿತು. 
ಇದಕ್ಕೆ ಯಾವುದೇ ಮದ್ದಿಲ್ಲವೇ ಇಶಾನಿ? ವಿವೇಕ್ ಕೇಳಿದ.
ಇಶಾನಿ ತಲೆ ತಗ್ಗಿಸಿದಳು. "ಮೆಡಿಕಲ್ ಸೈನ್ಸ್‌ನಲ್ಲಿ ಇದಕ್ಕೆ ತಕ್ಷಣದ ಮದ್ದಿಲ್ಲ ವಿವೇಕ್. ಆ ಕೆಮಿಕಲ್ ನಿನ್ನ ಮೆದುಳಿನ ರಿಸೆಪ್ಟರ್‌ಗಳನ್ನು ಸಂಪೂರ್ಣವಾಗಿ ಆವರಿಸಿಕೊಂಡಿದೆ. ನೀನು ಇನ್ನು ಕೆಲವೇ ದಿನಗಳಲ್ಲಿ ಪೂರ್ತಿಯಾಗಿ ಕೋಮಾ ಸ್ಥಿತಿಗೆ ತಲುಪುತ್ತೀಯಾ.
ವಿವೇಕ್ ಆ ಕ್ಷಣದಲ್ಲಿ ಆಗಲೇ ಬದುಕಿನ ಅಂಚಿಗೆ ಬಂದು ನಿಂತಿದ್ದ. ಅವನಿಗೆ ಕನ್ನಡಿಯ ಮುಂದೆ ನಿಂತಾಗ ತನ್ನ ಮುಖವೇ ಕಾಣದಂತೆ ಕತ್ತಲೆ ಆವರಿಸುತ್ತಿತ್ತು. ಆದರೆ ಅವನ ಹೆಸರೇ 'ವಿವೇಕ್' ಅಂದರೆ ವಿವೇಚನೆ. ಅವನ ಒಳಗಿದ್ದ ಆ ಹಳೆಯ ಬಾಕ್ಸರ್ ಮತ್ತು ಹಠಮಾರಿ ಬರಹಗಾರ ಕೊನೆಯ ಬಾರಿಗೆ ಕಣ್ಣು ಬಿಟ್ಟ. ಮೆದುಳಿಗೆ ಕೆಮಿಕಲ್ ಉಣಿಸಿ ನನ್ನನ್ನು ಸಾಯಿಸಬಹುದು, ಆದರೆ ನನ್ನ ಒಳಮನಸ್ಸಿನ ಆತ್ಮವಿಶ್ವಾಸವನ್ನು ಆ ಕೆಮಿಕಲ್ ಮುಟ್ಟಲು ಸಾಧ್ಯವಿಲ್ಲ ಎಂದು ವಿವೇಕ್ ಗರ್ಜಿಸಿದ.
ಅವನು ಅಂದೇ ಒಂದು ನಿರ್ಧಾರ ಮಾಡಿದ. ಯಾವುದೇ ಆರ್ಟಿಫಿಷಿಯಲ್ ಮೆಡಿಸಿನ್ ಬಳಸದೆ, ತನ್ನ ಮೆದುಳಿನ ಕೆಮಿಕಲ್ಸ್ ಅನ್ನು ನ್ಯಾಚುರಲ್ ಆಗಿ ಮರುಉತ್ಪತ್ತಿ ಮಾಡಲು ತಾನೇ ಒಂದು 'ಯುದ್ಧ' ಶುರುಮಾಡಬೇಕೆಂದುಕೊಂಡ.
ಮರುದಿನದಿಂದ ವಿವೇಕ್‌ನ ಅಸಲಿ ಹೋರಾಟ ಆರಂಭವಾಯಿತು. ಮೆದುಳಿನಲ್ಲಿ ಕೆಮಿಕಲ್ ಸ್ಲೋ ಆದಾಗ ಹಾಸಿಗೆಯಿಂದ ಏಳುವುದೇ ಒಂದು ನರಕದಂತೆ ಭಾಸವಾಗುತ್ತಿತ್ತು. ಆದರೂ ವಿವೇಕ್ ತನ್ನ ಇಡೀ ಶಕ್ತಿಯನ್ನು ಕ್ರೋಢೀಕರಿಸಿ ಮುಂಜಾನೆ ನಾಲ್ಕು ಗಂಟೆಗೆ ಎದ್ದನು. ಅವನು ಮತ್ತೆ ಬಾಕ್ಸಿಂಗ್ ಗ್ಲೌಸ್ ಕೈಗೆ ತೊಟ್ಟುಕೊಂಡನು. ಮೊದಲ ದಿನ ಪಂಚ್ ಬ್ಯಾಗ್‌ಗೆ ಹೊಡೆಯಲು ಹೋದಾಗ ಅವನ ಕೈಗಳು ನಡುಗಿ ನೆಲಕ್ಕೆ ಬಿದ್ದನು, ಮೆದುಳು ನಿನ್ನಿಂದ ಸಾಧ್ಯವಿಲ್ಲ, ನೀನು ಸೋತಿದ್ದೀಯಾ ಎಂದು ನೆಗೆಟಿವ್ ಸಿಗ್ನಲ್ ನೀಡುತ್ತಿತ್ತು. ಆದರೆ ವಿವೇಕ್ ಮೌನವಾಗಿ ಎದ್ದು ನಿಂತು ಮತ್ತೆ ಪಂಚ್ ಮಾಡಿದ.
ಕಠಿಣ ದೈಹಿಕ ಶ್ರಮ ಮತ್ತು ತೀವ್ರವಾದ ವ್ಯಾಯಾಮವು ಮೆದುಳಿನಲ್ಲಿ ನೈಸರ್ಗಿಕವಾಗಿ ಡೋಪಮೈನ್ ಮತ್ತು ಎಂಡಾರ್ಫಿನ್ ಕೆಮಿಕಲ್‌ಗಳನ್ನು ಬೂಸ್ಟ್ ಮಾಡುತ್ತದೆ ಎಂಬ ವೈಜ್ಞಾನಿಕ ಸತ್ಯ ಅವನಿಗೆ ಗೊತ್ತಿತ್ತು. ದಿನಕ್ಕೆ ನಾಲ್ಕು ಗಂಟೆಗಳ ಕಾಲ ಕಠಿಣ ಬಾಕ್ಸಿಂಗ್ ಪ್ರಾಕ್ಟೀಸ್, ಮಳೆಯಲ್ಲೇ RTRT ಬೈಕ್ ಹತ್ತಿ ಕಿಲೋಮೀಟರ್‌ಗಟ್ಟಲೆ ರೈಡಿಂಗ್ ಮಾಡುತ್ತಾ ತನ್ನ ಮೆದುಳಿಗೆ ಕೃತಕವಾಗಿ ಅಡ್ರಿನಾಲಿನ್ ರಶ್ ನೀಡಲು ಶುರುಮಾಡಿದ. ಒಳಗೆ ಕಣ್ಣೀರು ಬರುತ್ತಿದ್ದರೂ, ಬಲವಂತವಾಗಿ ನಗುತ್ತಾ ತನ್ನ ಸಿರೊಟೋನಿನ್ ಮಟ್ಟವನ್ನು ಹೆಚ್ಚಿಸಿಕೊಳ್ಳಲು ಪ್ರಯತ್ನಿಸಿದ. ವಾರಗಳು ಉರುಳಿದವು. ವಿವೇಕ್‌ನ ಜಿಗುಟುತನದ ಮುಂದೆ ಆ ಕರಾಳ 'ಕೆಮಿಕಲ್-X' ಸೋಲಲು ಶುರುಮಾಡಿತು. ಅವನ ಮೆದುಳಿನ ನ್ಯೂರಾನ್‌ಗಳು ಮತ್ತೆ ಜೀವ ಪಡೆದುಕೊಂಡವು. ಮಂಜು ಕವಿದಿದ್ದ ತಲೆಯಲ್ಲಿ ಆಲೋಚನೆಗಳ ಸ್ಪಷ್ಟತೆ ಮೂಡಿತು. ಅವನ ಬೆರಳುಗಳು ಮತ್ತೆ ಲ್ಯಾಪ್‌ಟಾಪ್ ಕೀಲಿಮಣೆಯ ಮೇಲೆ ವೇಗವಾಗಿ ಓಡಲು ಶುರುಮಾಡಿದವು. ಆದರೆ ಈ ಬಾರಿ ಅವನು ಬರೆಯುತ್ತಿರುವುದು ಯಾವುದೇ ಕಲ್ಪಿತ ಕಥೆಯಲ್ಲ ತನ್ನ ಮೆದುಳನ್ನು ಹ್ಯಾಕ್ ಮಾಡಿದ ಆ 'ಡಾರ್ಕ್ ಸೆಂಟರ್' ಗ್ಯಾಂಗ್‌ನ ಕರಾಳತನವನ್ನು ಜಗತ್ತಿನ ಮುಂದೆ ತರಲು ಅವನು ತನ್ನ ಲೇಖನಿಯನ್ನೇ ಅಸ್ತ್ರವಾಗಿಸಿಕೊಂಡಿದ್ದ.
ಒಂದು ರಾತ್ರಿ, ಇಶಾನಿ ನೀಡಿದ ಮಾಹಿತಿಯ ಮೇರೆಗೆ ವಿವೇಕ್ ಆ ಡಾರ್ಕ್ ಸೆಂಟರ್ ಗ್ಯಾಂಗ್‌ನ ಮುಖ್ಯ ಅಡಗುತಾಣವಾದ ಬಂದರಿನ ಹಳೆಯ ಅಂಡರ್‌ಗ್ರೌಂಡ್ ಲ್ಯಾಬ್‌ಗೆ ನುಗ್ಗಿದನು. ಅಲ್ಲಿ ಆ ಗ್ಯಾಂಗ್‌ನ ಮುಖ್ಯಸ್ಥ ಡಾ. ಸೋಮಣ್ಣ ತನ್ನ ಕಂಪ್ಯೂಟರ್ ಸರ್ವರ್ ಮುಂದೆ ಕುಳಿತು ನಗುತ್ತಿದ್ದ. ವಿವೇಕ್ ಒಳಗೆ ಬರುತ್ತಿದ್ದಂತೆ ಸೋಮಣ್ಣ ಆಶ್ಚರ್ಯದಿಂದ ಎದ್ದು ನಿಂತ, ವಿವೇಕ್ ನೀನು ಇಷ್ಟೊತ್ತಿಗೆ ಹುಚ್ಚನಾಗಿ ಸಾಯಬೇಕಿತ್ತಲ್ಲ? ನಿನ್ನ ಮೆದುಳಿನ ಕೆಮಿಕಲ್ಸ್ ಅನ್ನು ನನ್ನ ದ್ರವ ಸಂಪೂರ್ಣವಾಗಿ ಲಾಕ್ ಮಾಡಿತ್ತಲ್ಲವೇ? ಎಂದು ಕೂಗಿದ.
ವಿವೇಕ್ ಮುಗುಳ್ನಗುತ್ತಾ ತನ್ನ ಬಾಕ್ಸಿಂಗ್ ಗ್ಲೌಸ್ ಬಿಗಿಗೊಳಿಸುತ್ತ ಸೋಮಣ್ಣ, ಮನುಷ್ಯನ ಮೆದುಳಿನಲ್ಲಿರೋ ಕೆಮಿಕಲ್‌ಗಳನ್ನು ನೀನು ಸೃಷ್ಟಿಸಿದ ದ್ರವದಿಂದ ಸ್ಲೋ ಮಾಡಬಹುದು. ಆದರೆ ಒಬ್ಬ ಮನುಷ್ಯನ ಒಳಮನಸ್ಸಿನ ಹಠ, ವಿವೇಚನೆ ಮತ್ತು ಹೋರಾಡುವ ಗುಣವನ್ನು ಜಗತ್ತಿನ ಯಾವ ಕೆಮಿಕಲ್‌ನಿಂದಲೂ ಲಾಕ್ ಮಾಡಲು ಸಾಧ್ಯವಿಲ್ಲ.
ಅಷ್ಟರಲ್ಲೇ ಸೋಮಣ್ಣನ ಬಾಡಿಗಾರ್ಡ್ಸ್ ವಿವೇಕ್‌ನ ಮೇಲೆ  ಬಿದ್ದರು. ಆದರೆ ಈ ಬಾರಿ ವಿವೇಕ್‌ನ ಮೆದುಳಿನಲ್ಲಿ ನ್ಯಾಚುರಲ್ ಡೋಪಮೈನ್ ಮತ್ತು ಅಡ್ರಿನಾಲಿನ್ ಕೆಮಿಕಲ್‌ಗಳ ಭೀಕರ ಸ್ಫೋಟವಾಗಿತ್ತು ಅವನು ತನ್ನ ಕಡಕ್ ಬಾಕ್ಸಿಂಗ್ ಪಂಚ್‌ಗಳ ಮೂಲಕ ಪ್ರತಿಯೊಬ್ಬನನ್ನೂ ನೆಲಕ್ಕೆ ಉರುಳಿಸಿದ. ಸೋಮಣ್ಣ ಆ ಕತ್ತಲೆಯಲ್ಲಿ ವಿವೇಕ್‌ನ ನೆರಳನ್ನು ಕತ್ತರಿಸಲು ಫೌಂಟೇನ್ ಪೆನ್ ಎತ್ತಿದಾಗ, ವಿವೇಕ್ ಅವನ ಮುಖಕ್ಕೆ ಬಲವಾದ ಪಂಚ್ ನೀಡಿ ಅವನನ್ನು ಸರ್ವರ್ ಸ್ಕ್ರೀನ್ ಮೇಲಕ್ಕೆ ತಳ್ಳಿದ. ಇಡೀ ಡಾರ್ಕ್ ಸೆಂಟರ್‌ನ ಕಂಪ್ಯೂಟರ್‌ಗಳು ಚೂರುಚೂರಾದವು.
ವಿವೇಕ್ ಆ ಲ್ಯಾಬ್‌ನಲ್ಲಿದ್ದ ಇಡೀ ದೇಶದ ಯುವಕರ ಮೆದುಳನ್ನು ಹ್ಯಾಕ್ ಮಾಡಿದ್ದ ಡೇಟಾವನ್ನು ಮತ್ತು ಆ ರಹಸ್ಯ ಕೆಮಿಕಲ್‌ನ ಫಾರ್ಮುಲಾವನ್ನು ವಶಪಡಿಸಿಕೊಂಡು ಪೋಲಿಸ್ ಇಲಾಖೆಗೆ ಒಪ್ಪಿಸಿದ. ಮಾರನೇ ದಿನ ಇಡೀ ದೇಶದ ಮಾಧ್ಯಮಗಳಲ್ಲಿ ವಿವೇಕ್‌ನ ಈ ಭೀಕರ ಕಂಬ್ಯಾಕ್ ಮತ್ತು ಡಾರ್ಕ್ ಸೆಂಟರ್' ಗ್ಯಾಂಗ್‌ನ ಪತನದ ಸುದ್ದಿ ದೊಡ್ಡ ಹೆಡ್‌ಲೈನ್ ಆಯಿತು. ವಿವೇಕ್ ಕೇವಲ ತನ್ನ ಸಮಸ್ಯೆಯಿಂದ ಹೊರಬರಲಿಲ್ಲ, ಬದಲಾಗಿ ಇಡೀ ದೇಶದ ಯುವ ಪೀಳಿಗೆಗೆ ಒಬ್ಬ ರಿಯಲ್ ಹೀರೋ ಆಗಿ ಗೆದ್ದು ನಿಂತಿದ್ದ.

ಆದರೆ ಟ್ವಿಸ್ಟ್ ಇಲ್ಲೇ ಮುಗಿಯುವುದಿಲ್ಲ. ಎಲ್ಲವೂ ಸುಖಾಂತವಾಯಿತು ಎಂದು ವಿವೇಕ್ ತನ್ನ ರೂಮಿನಲ್ಲಿ ಕುಳಿತು ಬ್ಲಾಗ್ ಓಪನ್ ಮಾಡಿದಾಗ, ಅಲ್ಲಿ 'ಕೆಮಿಕಲ್' ಎಂಬ ಒಂದು ಹೊಸ ಕಥೆ ಪಬ್ಲಿಷ್ ಆಗಿತ್ತು. ಆ ಕಥೆಯನ್ನು ಬರೆದ ಬರಹಗಾರನ ಹೆಸರು ಕೆಳಗೆ ಇತ್ತು. Danger Writer - Sandeep Joshi.
ವಿವೇಕ್ ಆ ಕಥೆಯನ್ನು ಓದುತ್ತಾ ಹೋದಂತೆ ಅವನ ಮೈ ನಡುಗಿತು. ಅದರಲ್ಲಿ ಕೊನೆಯ ಸಾಲು ಹೀಗಿತ್ತು. ವಿವೇಕ್ ಗೆದ್ದಿದ್ದು ಸತ್ಯ. ಆದರೆ ವಾಸ್ತವದಲ್ಲಿ ವಿವೇಕ್ ತನಗೆ ತಾನೇ ಗೆದ್ದೆ ಎಂದುಕೊಳ್ಳುತ್ತಿರುವ ಈ ಇಡೀ ಜರ್ನಿ ಕೂಡ ಆ 'ಕೆಮಿಕಲ್-X' ಅವನ ಮೆದುಳಿನಲ್ಲಿ ಸೃಷ್ಟಿಸಿದ ಕೊನೆಯ ಹಂತದ ಭ್ರಮೆಯಾಗಿದೆ. ವಾಸ್ತವದಲ್ಲಿ ವಿವೇಕ್ ಇನ್ನೂ ಆ ಅಂಡರ್‌ಗ್ರೌಂಡ್ ಲ್ಯಾಬ್‌ನ ಬೆಡ್ ಮೇಲೆ ಪ್ರಜ್ಞೆಯಿಲ್ಲದೆ ಮಲಗಿದ್ದಾನೆ. ಅವನ ಮೆದುಳು ಸಾವಿನ ಹಂತ ತಲುಪುವ ಮುನ್ನ ಅವನಿಗೆ ಈ ರೀತಿಯ ಒಂದು ಸುಳ್ಳು ಗೆಲುವಿನ ಸಿನೆಮಾವನ್ನು ತೋರಿಸುತ್ತಿದೆ ಅಷ್ಟೇ.
ವಿವೇಕ್ ಗಾಬರಿಯಿಂದ ತನ್ನ ಕೈಯಲ್ಲಿದ್ದ ಫೋನ್ ಕೆಳಗೆ ಹಾಕಿದ. ಅವನು ಸುತ್ತಲೂ ನೋಡಿದಾಗ ಇಡೀ ರೂಮಿನ ಗೋಡೆಗಳು ಕರಗಿ ಕಪ್ಪು ಶಾಯಿಯಂತೆ ಹರಿಯುತ್ತಿರುವುದು ಕಂಡಿತು. ಪಕ್ಕದಲ್ಲಿ ಸೋಮಣ್ಣನ ಧ್ವನಿ ಕೇಳಿಸಿತು, ಸಬ್ಜೆಕ್ಟ್ ನಂಬರ್ 217 ಪೂರ್ತಿಯಾಗಿ ಕರಗಿದ್ದಾನೆ. ನೆಕ್ಸ್ಟ್ ಸಬ್ಜೆಕ್ಟ್ ಅನ್ನು ರೆಡಿ ಮಾಡಿ.
ಒಂದು ವೇಳೆ ನೀವು ಈಗ ಓದುತ್ತಿರುವ ಈ ಕಥೆಯೂ ಸಹ ಆ 'ಕೆಮಿಕಲ್' ನಿಮ್ಮ ಮೆದುಳಿನ ಒಳಗೆ ಹೋದಾಗ ಆಗುತ್ತಿರುವ ಭ್ರಮೆಯಾಗಿದ್ದರೆ? ಒಮ್ಮೆ ನಿಮ್ಮ ಕೈಗಳನ್ನು ನೋಡಿ, ಅವು ನಿಜವಾಗಿಯೂ ಅಲುಗಾಡುತ್ತಿದ್ದಾವಾ ಅಥವಾ ನಿಮ್ಮ ಮೆದುಳು ಕೇವಲ ಕಲ್ಪನೆ ಮಾಡುತ್ತಿದೆಯೇ?

 ನನ್ನ ಡೇಂಜರ್ ರೈಟರ್ ಪಯಣಕ್ಕೆ ನಿಮ್ಮದೊಂದು ಸಣ್ಣ ಬೆಂಬಲವಿರಲಿ

ಗೆಳೆಯರೇ, ಪ್ರತಿದಿನ ಹೊಸ ಹೊಸ ಕಥಗಳನ್ನು ಕಲ್ಪಿಸಿ, ನಿಮ್ಮ ಮೆದುಳಿಗೆ ಕೆಲಸ ಕೊಡುವ ಈ ಪ್ರಯತ್ನದ ಹಿಂದೆ ನನ್ನ ಎಷ್ಟೋ ಗಂಟೆಗಳ ಪರಿಶ್ರಮವಿದೆ. ಒಬ್ಬ ಸ್ವತಂತ್ರ ಬರಹಗಾರನಾಗಿ, ಈ ಬರವಣಿಗೆಯೇ ನನ್ನ ಶಕ್ತಿ. ನನ್ನ ಈ ಬರವಣಿಗೆ ನಿಮಗೆ ಇಷ್ಟವಾಗಿದ್ದರೆ ಮತ್ತು ಅಕ್ಷರಗಳ ಮೇಲಿನ ನನ್ನ ಈ ಪ್ರೀತಿಯನ್ನು ಪ್ರೋತ್ಸಾಹಿಸಲು ಇಚ್ಛಿಸಿದರೆ, ನೀವು ನನಗೆ ಒಂದು ಕಪ್ ಕಾಫಿ ಕೊಡಿಸುವ ಮೂಲಕ (Support me with a coffee) ನನ್ನ ಕೆಲಸವನ್ನು ಗೌರವಿಸಬಹುದು.

ನಿಮ್ಮ ಈ ಸಣ್ಣ ಸಹಾಯ ನನ್ನ ಮುಂದಿನ ವಿಭಿನ್ನ ಕಥೆಗಳಿಗೆ ದೊಡ್ಡ ಸ್ಪೂರ್ತಿ.
GPay / PhonePe / Paytm Number: 9019919635