ಶಾಪಗ್ರಸ್ತ ಬಂಗಲೆ ಮತ್ತು ಮೂರನೇ ಬಾಗಿಲು
ಚಿಕ್ಕಮಗಳೂರಿನ ಚಾರ್ಮಡಿ ಘಾಟಿಯ ದಟ್ಟ ಅರಣ್ಯದ ನಡುವೆ, ಮುಖ್ಯ ರಸ್ತೆಯಿಂದ ಸುಮಾರು ಐದುಕಿಲೋಮೀಟರ್ ಒಳಭಾಗದಲ್ಲಿದ್ದ ‘ಆಲ್ದೂರು ಬಂಗಲೆ’ ಎಂದರೆ ಆಕ್ಕಪಕ್ಕದ ಹಳ್ಳಿಯ ಜನ ಹಗಲಿನಲ್ಲಿಯೂ ಆ ಕಡೆ ತಲೆಹಾಕಿ ಮಲಗುತ್ತಿರಲಿಲ್ಲ. ಎಂಭತ್ತು ವರ್ಷಗಳ ಹಿಂದೆ ಆ ಬಂಗಲೆಯ ಯಜಮಾನ ಶೇಖರಯ್ಯ ಎಂಬುವವನು ಕ್ಷುದ್ರ ಶಕ್ತಿಗಳನ್ನು ಒಲಿಸಿಕೊಳ್ಳುವ ಸಲುವಾಗಿ ತನ್ನ ಹೆಂಡತಿ, ಹೆತ್ತ ಮಗಳು ಮತ್ತು ತಾಯಿಯನ್ನು ಒಂದೇ ರಾತ್ರಿ ಬಲಿ ಕೊಟ್ಟು, ತಾನೂ ಕುತ್ತಿಗೆಗೆ ಹಗ್ಗ ಬಿಗಿದುಕೊಂಡು ಸತ್ತಿದ್ದ. ಅಂದಿನಿಂದ ಆ ಬಂಗಲೆ ಹಾಳುಬಿದ್ದಿತ್ತು. ಆದರೆ ಪ್ರತಿ ಪೂರ್ಣಿಮೆಯ ರಾತ್ರಿ ಅಲ್ಲಿಂದ ಮಗುವಿನ ಅಳು, ಕತ್ತಲೆಯಲ್ಲಿ ಹರಿದಾಡುವ ಕಾಲಿನ ಗೆಜ್ಜೆಯ ಸದ್ದು ಮತ್ತು ಒಣಗಿದ ಎಲೆಗಳ ಮೇಲೆ ಯಾರೋ ತೆವಳಿಕೊಂಡು ಬರುವ ಶಬ್ದ ಕೇಳಿಸುತ್ತದೆ ಎಂಬ ಭೀಕರ ಪ್ರತೀತಿ ಇತ್ತು.
ರಘು ಒಬ್ಬ ಯೂಟ್ಯೂಬರ್. ಭೇದಿಸಲು ಸಾಧ್ಯವಾಗದ ಶಾಪಗ್ರಸ್ತ ಜಾಗಗಳಿಗೆ ಹೋಗಿ ರಾತ್ರಿ ಕಳೆಯುವುದು ಅವನ ಹುಚ್ಚಾಗಿತ್ತು. ದೆವ್ವ, ಭೂತಗಳೆಲ್ಲ ಬರೀ ಮನುಷ್ಯನ ಮನಸ್ಸಿನ ಭ್ರಮೆ ಮತ್ತು ಕತ್ತಲೆಯ ಭಯ ಅಷ್ಟೇ ಎಂದು ದೃಢವಾಗಿ ನಂಬಿದ್ದ ರಘು, ಆ ಪೂರ್ಣಿಮೆಯ ರಾತ್ರಿ ಆಲ್ದೂರು ಬಂಗಲೆಯಲ್ಲಿ ಒಂಟಿಯಾಗಿ ರಾತ್ರಿ ಕಳೆಯಲು ನಿರ್ಧರಿಸಿದ.
ಕೈಯಲ್ಲಿ ಬಲವಾದ ನೈಟ್-ವಿಷನ್ ಟಾರ್ಚ್, ಬೆನ್ನಲ್ಲಿ ಸಣ್ಣ ಬ್ಯಾಗ್ ಮತ್ತು ಧ್ವನಿ ಗ್ರಹಿಸುವ ತಂತ್ರಜ್ಞಾನವಿರುವ ಕ್ಯಾಮೆರಾ ಹಿಡಿದು ಅವನು ಆ ಬಂಗಲೆಯ ಬಾಗಿಲು ತಳ್ಳಿದಾಗ, ಕಿರ್ರ್ ಎಂಬ ದೈತ್ಯ ಸದ್ದು ಇಡೀ ಕಾಡಿನಲ್ಲಿ ಪ್ರತಿಧ್ವನಿಸಿತು. ಬಂಗಲೆಯ ಒಳಗಡೆ ಧೂಳು, ಜೇಡರ ಬಲೆ ಮತ್ತು ಪೀಳಿಗೆಗಳಿಂದ ಕೊಳೆತುಹೋದ ಮರದ ದುರ್ವಾಸನೆ ಮೂಗಿಗೆ ಬಡಿಯುತ್ತಿತ್ತು. ವಿಶಾಲವಾದ ಆ ಬಂಗಲೆಯಲ್ಲಿ ಒಟ್ಟು ಮೂರು ಕೊಠಡಿಗಳಿದ್ದವು. ಮೊದಲ ಎರಡು ಕೊಠಡಿಗಳು ಬಾಗಿಲೆಯೇ ಇಲ್ಲದೆ ಖಾಲಿಯಾಗಿ ಮಸಣದಂತೆ ಬಿದ್ದಿದ್ದವು. ಆದರೆ ಕಾರಿಡಾರ್‌ನ ಕೊನೆಯಲ್ಲಿದ್ದ 'ಮೂರನೇ ಬಾಗಿಲು' ಮಾತ್ರ ದಪ್ಪನೆಯ, ಮಲಿಕಟ್ಟಿದ ಕಡುಕಪ್ಪು ಕಬ್ಬಿಣದ ಬೀಗದಿಂದ ಬಂದ್ ಆಗಿತ್ತು. ಆ ಬಾಗಿಲಿನ ಮೇಲೆ ಯಾವುದೋ ಪುರಾತನ ಮಂತ್ರಗಳನ್ನು ಕೆತ್ತಿದಂತೆ ಕಾಣುತ್ತಿತ್ತು.
ರಾತ್ರಿ ಹನ್ನೊಂದು ಗಂಟೆಯಾಯಿತು. ರಘು ಹಾಲ್‌ನ ಮಧ್ಯಭಾಗದಲ್ಲಿ ತನ್ನ ಕ್ಯಾಮೆರಾವನ್ನು ಟ್ರೈಪಾಡ್‌ಗೆ ಸಿಕ್ಕಿಸಿ, ಸಣ್ಣ ಚಾಪೆ ಹಾಸಿ ಕುಳಿತ. ವಾತಾವರಣ ತೀರಾ ನಿಶ್ಯಬ್ಧವಾಗಿತ್ತು. ಹೊರಗೆ ಗಾಳಿಯೂ ಬೀಸುತ್ತಿರಲಿಲ್ಲ, ಕಾಡಿನ ಕ್ರಿಮಿ ಕೀಟಗಳ ಶಬ್ದವೂ ಇರಲಿಲ್ಲ. ಆ ಅಸ್ವಾಭಾವಿಕ ಮೌನವೇ ಮೈಗೆ ನಡುಕ ತರಿಸುವಂತಿತ್ತು. ಇದ್ದಕ್ಕಿದ್ದಂತೆ, ಹನ್ನೆರಡು ಗಂಟೆಯಾಗುತ್ತಿದ್ದಂತೆ ಬಂಗಲೆಯ ಉಷ್ಣಾಂಶ ಒಮ್ಮೆಲೇ ತೀವ್ರವಾಗಿ ಕುಸಿಯಿತು. ರಘು ಉಸಿರಾಡಿದಾಗ ಅವನ ಬಾಯಿಂದ ಹಬೆ ಬರತೊಡಗಿತು. ಅವನು ಹಿಡಿದಿದ್ದ ಟಾರ್ಚ್‌ನ ಬೆಳಕು ಸಣ್ಣದಾಗಿ ಮಿನುಗುತ್ತಾ, ಟಿಕ್, ಟಿಕ್' ಎಂದು ಆರಿ ಆರಿ ಉರಿಯಲು ಶುರುವಾಯಿತು.
ಅಷ್ಟರಲ್ಲೇ ಛಣ್, ಛಣ್, ಛಣ್.ಮಗುವಿನ ಕಾಲಿನ ಗೆಜ್ಜೆಯ ಸದ್ದು, ಆ ಶಬ್ದ ಮೇಲ್ಛಾವಣಿಯ ಮೇಲಿಂದ ಅಥವಾ ಕಾರಿಡಾರ್‌ನಿಂದ ಬರುತ್ತಿರಲಿಲ್ಲ. ಬದಲಿಗೆ ರಘು ಕುಳಿತಿದ್ದ ಚಾಪೆಯ ಕೆಳಗಿನ ನೆಲದಿಂದ, ಅಂದರೆ ನೆಲಮಾಳಿಗೆಯ ಒಳಗಿಂದ ಬರುತ್ತಿತ್ತು. ರಘುವಿನ ಮೈಯಲ್ಲಿದ್ದ ಕೂದಲು ನೆಟ್ಟಗಾದವು. ಅವನ ಬೆನ್ನೆಲುಬಿನಲ್ಲಿ ಚಳಿ ಹುಟ್ಟಿತು. ಅವನು ತಕ್ಷಣ ಎದ್ದು ನಿಂತು ಟಾರ್ಚ್ ಬೆಳಕನ್ನು ನೆಲಕ್ಕೆ ಬೀರಿದ. ಧೂಳು ಹಿಡಿದ ಕಲ್ಲಿನ ನೆಲ ಬಿಟ್ಟರೆ ಅಲ್ಲಿ ಏನೂ ಇರಲಿಲ್ಲ. ಆದರೆ ಮರುಕ್ಷಣವೇ, ಆ ಕಪ್ಪು ಬೀಗ ಜಡಿತಿದ್ದ 'ಮೂರನೇ ಬಾಗಿಲಿನ' ಕಡೆಯಿಂದ ಶಬ್ದ ಬರಲು ಶುರುವಾಯಿತು. ಯಾರೋ ಒಳಗಿನಿಂದ ಆ ದಪ್ಪನೆಯ ಮರದ ಬಾಗಿಲನ್ನು ತಮ್ಮ ಬರಿ ಕೈಗಳಿಂದ ಗೀಚುತ್ತಿದ್ದರು. 'ಚುರ್ರ್, ಚುರ್ರ್ ಎಂದು ಚೂಪಾದ ನಖಗಳಿಂದ ಮರವನ್ನು ಸೀಳುವ ಸದ್ದು ಇಡೀ ಬಂಗಲೆಯಲ್ಲಿ ಆವರಿಸಿತು.
ರಘುವಿಗೆ ಜೀವವೇ ಹೋದಂತಾಯಿತು. ಹೆದರಿಕೆಯನ್ನು ಹತ್ತಿಕ್ಕುತ್ತಾ, ಧೈರ್ಯ ತಂದುಕೊಂಡು ಕ್ಯಾಮೆರಾ ಹಿಡಿದು ಆ ಬಾಗಿಲ ಹತ್ತಿರ ಹೋದ. ಬಾಗಿಲಿನ ಕೆಳಗಿದ್ದ ಸಣ್ಣ ಗ್ಯಾಪ್‌ನಿಂದ ಚಿಕ್ಕದಾಗಿ ಕಪ್ಪು ಬಣ್ಣದ, ರಕ್ತದಂತಹ ದ್ರವವೊಂದು ನಿಧಾನವಾಗಿ ಹರಿದು ಹೊರಗೆ ಬರುತ್ತಿತ್ತು. ಅದೇ ಸಮಯಕ್ಕೆ ಆ ಬಾಗಿಲಿನ ಒಳಗಿನಿಂದ ಕರುಳು ಬಗೆಯುವಂತಹ ಅಳುವಿನ ಶಬ್ದ ಕೇಳಿಸಿತು. ಅದು ಮಗುವಿನ ಅಳುವಾಗಿರಲಿಲ್ಲ, ಅದು ಮನುಷ್ಯನ ಧ್ವನಿಯೇ ಅಲ್ಲದ, ಭೀಕರವಾದ ಹೆಣ್ಣಿನ ಆರ್ತನಾದವಾಗಿತ್ತು.
ರಘು ಭಯದಿಂದ ಹಿಂದೆ ಹೆಜ್ಜೆ ಇಟ್ಟ. ಅವನಿಗೆ ತಾನು ಮಾಡಿದ ತಪ್ಪು ಅರ್ಥವಾಯಿತು. ಅವನು ಓಡಿಹೋಗಿ ಪ್ರಮುಖ ಹೆಬ್ಬಾಗಿಲನ್ನು ತಳ್ಳಿದ. ಆದರೆ ಬಂದಾಗ ಸುಲಭವಾಗಿ ತೆರೆದಿದ್ದ ಆ ಬೃಹತ್ ಮರದ ಬಾಗಿಲು ಈಗ ಸಿಮೆಂಟ್ ಗೋಡೆಯಂತೆ ಗಟ್ಟಿಯಾಗಿ ನಿಂತಿತ್ತು. ಅವನು ಎಷ್ಟೇ ಮೈಯೆಲ್ಲ ಹಾಕಿ ತಳ್ಳಿದರೂ, ಕಾಲಿನಿಂದ ಒದ್ದರೂ ಅದು ಕದಲಲಿಲ್ಲ. ಫೋನ್ ತೆಗೆದು ನೋಡಿದರೆ No Network ಬ್ಯಾಟರಿ ಕೂಡ ಶೇಕಡಾ ನೂರರಿಂದ ಒಮ್ಮೆಲೇ ಶೂನ್ಯಕ್ಕೆ ಇಳಿಯುತ್ತಿತ್ತು. ಅಷ್ಟರಲ್ಲಿ, ಕಾರಿಡಾರ್‌ನಲ್ಲಿದ್ದ ಆ ಮೂರನೇ ಬಾಗಿಲಿನಲ್ಲಿದ್ದ ದೊಡ್ಡ ಕಬ್ಬಿಣದ ಬೀಗ 'ಟಪ್' ಎಂದು ತಾನಾಗಿಯೇ ಮುರಿದು ಕೆಳಗೆ ಬಿತ್ತು. ಬಾಗಿಲು ನಿಧಾನವಾಗಿ ಕಿರ್ರ್ ಎಂದು ತೆರೆದುಕೊಂಡಿತು. ಒಳಗಡೆ ಕಡು ಕತ್ತಲೆ. ರಘು ನಡುಗುವ ಕೈಗಳಿಂದ ಟಾರ್ಚ್ ಬೆಳಕನ್ನು ಆ ಕೊಠಡಿಯೊಳಗೆ ಬೀರಿದ. ಅಲ್ಲಿ ಕಂಡ ದೃಶ್ಯ ಅವನ ಜೀವವನ್ನೇ ಹಿಂಡಿ ಹಿಂಡಿ ಹಿಂಡಿದಂತಾಯಿತು. ಕೊಠಡಿಯ ಮೇಲ್ಛಾವಣಿಯ ಮರದ ತೊಲೆಯಿಂದ ಹಳೆಯ ಕಪ್ಪು ಹಗ್ಗವೊಂದು ನೇತಾಡುತ್ತಿತ್ತು. ಆ ಹಗ್ಗಕ್ಕೆ ಬಟ್ಟೆಯಿಲ್ಲದ, ಪೂರ್ತಿಯಾಗಿ ಕಪ್ಪಗಾಗಿ ಕೊಳೆತು ಹೋಗಿದ್ದ ಕಳೇಬರವೊಂದು ತಲೆಕೆಳಗಾಗಿ ನೇತಾಡುತ್ತಿತ್ತು. ಆ ಕಳೇಬರದ ಕಣ್ಣುಗಳಿರಬೇಕಾದ ಜಾಗದಲ್ಲಿ ಕೇವಲ ಕಪ್ಪು ಗುಂಡಿಗಳಿದ್ದವು, ಮುಖದ ಚರ್ಮವೆಲ್ಲ ಸುಟ್ಟು ಹೋದಂತೆ ಇತ್ತು. ರಘು ಟಾರ್ಚ್ ಹಾಕುತ್ತಿದ್ದಂತೆ, ಆ ತಲೆಕೆಳಗಾಗಿ ನೇತಾಡುತ್ತಿದ್ದ ಕಳೇಬರವು ತನ್ನ ತಲೆಯನ್ನು ಪೂರ್ತಿಯಾಗಿ ೧೮೦ ಡಿಗ್ರಿ ತಿರುಗಿಸಿ, ಕತ್ತಿನ ಮೂಳೆ 'ಟಕ್' ಎಂದು ಮುರಿಯುವ ಸದ್ದಿನೊಂದಿಗೆ ರಘುವಿನ ಕಡೆಗೆ ನೋಡಿತು.
ಅದರ ಬಾಯಿ ನಿಧಾನವಾಗಿ ಅಗಲವಾಯಿತು. ಕೆನ್ನೆಗಳು ಹರಿದು ಬಾಯಿಯ ಗಾತ್ರ ಕಿವಿಯವರೆಗೂ ಭೀಕರವಾಗಿ ದೊಡ್ಡದಾಯಿತು. ಅದರಿಂದ ಹೊರಬಂದ ಚೀರಾಟದ ಶಬ್ದ ಇಡೀ ಬಂಗಲೆಯನ್ನು ನಡುಗಿಸಿತು. ರಘು ಕಿರುಚುತ್ತಾ ವಾಪಸ್ ಬಾಗಿಲಿಗೆ ಮೈಯೆಲ್ಲ ಹಾಕಿ ಜಚ್ಚಿಕೊಂಡ. ಆ ಕಳೇಬರವು ಹಗ್ಗದಿಂದ ಬಿಚಿಕೊಂಡು ಕೆಳಗೆ ಬಿತ್ತು. ಅದು ನಾರ್ಮಲ್ ಮನುಷ್ಯರಂತೆ ನಡೆಯುತ್ತಿರಲಿಲ್ಲ, ತನ್ನ ಕೈ ಮತ್ತು ಕಾಲುಗಳನ್ನು ಹಿಮ್ಮುಖವಾಗಿ ಮಡಿಚಿ, ನಾಯಿಯಂತೆ ನೆಲದ ಮೇಲೆ ತೆವಳುತ್ತಾ ಅತಿ ವೇಗವಾಗಿ ರಘುವಿನ ಕಡೆಗೆ ಬರತೊಡಗಿತು. ಅದರ ಪ್ರತಿಯೊಂದು ಚಲನೆಯಲ್ಲೂ ಆ ಗೆಜ್ಜೆಯ ಸದ್ದು 'ಛಣ್ ಛಣ್' ಎಂದು ಕಿವಿಯ ತಮಟೆ ಹರಿಯುವಂತೆ ಜೋರಾಗಿ ಕೇಳಿಸುತ್ತಿತ್ತು.
ಕಾಪಾಡಿ ಯಾರಾದರೂ ಕಾಪಾಡಿ ಎಂದು ರಘು ರಕ್ತ ಬರುವಂತೆ ಬಾಗಿಲಿಗೆ ತಲೆ ಚಚ್ಚಿಕೊಂಡ. ಆ ಆಕೃತಿ ಅವನ ತೀರಾ ಹತ್ತಿರ ಬಂತು. ಕಪ್ಪು ಗುಂಡಿಯಂತಿದ್ದ ಅದರ ಕಣ್ಣುಗಳಿಂದ ಕೆಂಪು ರಕ್ತ ಹರಿಯುತ್ತಿತ್ತು. ಆ ಕೊಳೆತ ಆಕೃತಿ ತನ್ನ ನೀಳವಾದ, ಚೂಪಾದ ಉಗುರುಗಳಿದ್ದ ಕೈಗಳಿಂದ ರಘುವಿನ ಕುತ್ತಿಗೆಯನ್ನು ಬಿಗಿಯಾಗಿ ಹಿಡಿಯಿತು. ಆ ಕೈಗಳ ಸ್ಪರ್ಶ ಮಂಜುಗಡ್ಡೆಗಿಂತ ತಂಪಾಗಿತ್ತು ಮತ್ತು ಮಸಣದ ದುರ್ವಾಸನೆಯಿಂದ ಕೂಡಿತ್ತು. ರಘುವಿನ ಉಸಿರು ಕಟ್ಟತೊಡಗಿತು. ಜೀವ ಉಳಿಸಿಕೊಳ್ಳಲು ಅವನು ಕೈಕಾಲು ಬಡಕೊಂಡ. ಅವನ ಕಣ್ಣುಗಳು ಮೇಲೇರಿದವು. ಕ್ಯಾಮೆರಾ ನೆಲಕ್ಕೆ ಬಿದ್ದು ವೀಡಿಯೊ ರೆಕಾರ್ಡ್ ಆಗುತ್ತಲೇ ಇತ್ತು. ಬಂಗಲೆಯ ಕತ್ತಲೆಯಲ್ಲಿ ಅವನ ಕೊನೆಯ ಆಕ್ರಂದನ ಅಡಗಿಹೋಯಿತು.
ಮಾರನೇ ದಿನ ಬೆಳಿಗ್ಗೆ, ಕಾಡಿಗೆ ಕಟ್ಟಿಗೆ ತರಲು ಹೋದ ಹಳ್ಳಿಯ ಜನ ಬಂಗಲೆಯ ಬಾಗಿಲು ಅರ್ಧ ತೆರೆದಿರುವುದನ್ನು ನೋಡಿದರು. ಅನುಮಾನ ಬಂದು ಪೊಲೀಸರಿಗೆ ವಿಷಯ ಮುಟ್ಟಿಸಿದರು. ಪೊಲೀಸರು ಒಳಗಡೆ ಬಂದು ನೋಡಿದಾಗ, ರಘು ಆ ಮೂರನೇ ಕೊಠಡಿಯ ಮೇಲ್ಛಾವಣಿಯ ಹಗ್ಗಕ್ಕೆ ನೇಣು ಬಿಗಿದುಕೊಂಡು ಸತ್ತಿದ್ದ. ಅವನ ಮುಖದಲ್ಲಿದ್ದ ಭೀಕರ ಭಯದ ಗುರುತುಗಳು ಮತ್ತು ಕುತ್ತಿಗೆಯ ಮೇಲಿದ್ದ ಕಪ್ಪು ಬೆರಳುಗಳ ಗುರುತುಗಳನ್ನು ನೋಡಿ ಬಂದಿದ್ದ ಪೊಲೀಸರಿಗೂ ಬೆವರು ಹರಿಯಿತು. ನೆಲದ ಮೇಲೆ ಬಿದ್ದಿದ್ದ ಅವನ ಕ್ಯಾಮೆರಾವನ್ನು ಪೊಲೀಸರು ಪರಿಶೀಲಿಸಿದಾಗ, ಅದರಲ್ಲಿ ರಾತ್ರಿ 12:00 ಗಂಟೆಯವರೆಗಿನ ವೀಡಿಯೊ ಮಾತ್ರ ಸ್ಪಷ್ಟವಾಗಿತ್ತು. ಆದರೆ 12:01ಕ್ಕೆ ರಘು ತಾನೇ ತಾನಾಗಿ ಮಂತ್ರಮುಗ್ದನಂತೆ, ಕಣ್ಣುಗಳನ್ನು ಮೇಲೇರಿಸಿ ನಡೆದುಕೊಂಡು ಹೋಗಿ, ಆ ಮೂರನೇ ಕೊಠಡಿಯಲ್ಲಿದ್ದ ಹಗ್ಗಕ್ಕೆ ತನ್ನ ಕುತ್ತಿಗೆಯನ್ನು ತಾನೇ ಸಿಕ್ಕಿಸಿಕೊಂಡು, ವಿಕೃತವಾಗಿ ನಗುತ್ತಾ ನೇಣು ಹಾಕಿಕೊಳ್ಳುತ್ತಿರುವುದು ರೆಕಾರ್ಡ್ ಆಗಿತ್ತು. ಅವನ ಸುತ್ತಲೂ ಯಾವುದೇ ಆಕೃತಿ ವೀಡಿಯೊದಲ್ಲಿ ಕಾಣಿಸುತ್ತಿರಲಿಲ್ಲ. ಆದರೆ ಹಿನ್ನೆಲೆಯಲ್ಲಿ ಮಾತ್ರ ಮಗುವಿನ ಆ ವಿಕೃತ ಗೆಜ್ಜೆಯ ನಗು ಮತ್ತು ಯಾರೋ ಕತ್ತಲೆಯಲ್ಲಿ ತೆವಳುವ ಸದ್ದು 'ಛಣ್, ಛಣ್. ಎಂದು ಅತ್ಯಂತ ಸ್ಪಷ್ಟವಾಗಿ ಕೇಳಿಸುತ್ತಿತ್ತು.
ಆಲ್ದೂರು ಬಂಗಲೆಯ ಮೂರನೇ ಬಾಗಿಲು ಇಂದಿಗೂ ಅಮಾವಾಸ್ಯೆ ಮತ್ತು ಪೂರ್ಣಿಮೆಯ ರಾತ್ರಿ ತಾನಾಗಿಯೇ ತೆರೆದುಕೊಳ್ಳುತ್ತದೆ ತನ್ನ ಮುಂದಿನ ಬಲಿಗಾಗಿ.