Helmet in Kannada Drama by Danger Writer books and stories PDF | ಹೆಲ್ಮೆಟ್

Featured Books
Categories
Share

ಹೆಲ್ಮೆಟ್

ಮಂಗಳೂರಿನ ಕ್ಲಾಕ್ ಟವರ್ ಜಂಕ್ಷನ್ ಎಂದರೆ ಅದು ವಾಹನಗಳ ಸಾಗರ. ಸುಡುವ ಬಿಸಿಲಿಗೆ ರಸ್ತೆಯೇ ಕರಗಿ ಹೋಗುವ ಹದದಲ್ಲಿತ್ತು. ಕರ್ಕಶ ಹಾರ್ನ್ ಶಬ್ದಗಳ ನಡುವೆ ಟ್ರಾಫಿಕ್ ಪೊಲೀಸ್ ವಿಕ್ರಮ್ ಸಿಂಹ ತನ್ನ HF Deluxe ನಿಲ್ಲಿಸಿ, ಹಣೆಯ ಬೆವರಿನ ಹನಿಗಳನ್ನು ಒರೆಸಿಕೊಳ್ಳುತ್ತಾ ರಸ್ತೆಯನ್ನೇ ಹದ್ದಿನಂತೆ ನೋಡುತ್ತಿದ್ದರು. ವಿಕ್ರಮ್ ಸಿಂಹ ಎಂದರೆ ಈ ಭಾಗದ ಪುಂಡ ಪೋಕರಿಗಳಿಗೆ ಒಂದು ರೀತಿಯ ನಡುಕ. ಆದರೆ ಆ ನಡುಕಕ್ಕೆ ಕಾರಣ ಅವರ ಲಾಠಿಯಲ್ಲ, ಅವರ ಚುರುಕಾದ ಮೆದುಳು. ದಿನನಿತ್ಯ ರೂಲ್ಸ್ ಬ್ರೇಕ್ ಮಾಡುತ್ತಿದ್ದ ಅದೆಷ್ಟೋ ಜನರಿಗೆ ದಂಡ ಹಾಕುತ್ತಿದ್ದರೂ, ಅವರಿಗೆ ಒಂದು ವಿಷಯ ಕಾಡುತ್ತಿತ್ತು—ದಂಡ ಹಾಕುವುದರಿಂದ ಹಣ ಸರ್ಕಾರದ ಖಜಾನೆ ಸೇರುತ್ತದೆಯೇ ಹೊರತು ಜನರ ತಲೆಯಲ್ಲಿರುವ ಬುದ್ಧಿ ಬದಲಾಗುತ್ತಿಲ್ಲ.
 ಅಷ್ಟರಲ್ಲಿ ವಿಕ್ರಮ್ ಕಣ್ಣಿಗೆ ಆ ದೃಶ್ಯ ಬಿತ್ತು. ರಸ್ತೆಯ ಆ ಕಡೆ ಮರದ ಕೆಳಗೆ ಸೈಕಲ್ ಮೇಲೆ ಐದಾರು ಹೆಲ್ಮೆಟ್‌ಗಳನ್ನು ನೇತುಹಾಕಿಕೊಂಡು ಒಬ್ಬ ವೃದ್ಧ ಕುಳಿತಿದ್ದ. ಅವನೇ ಮುತ್ತಪ್ಪ ಅವನ ಮುಖ ಬಿರುಬಿಸಿಲಿಗೆ ಕಪ್ಪಗಾಗಿತ್ತು, ಕಣ್ಣಲ್ಲಿ ಹತಾಶೆ ತುಂಬಿತ್ತು. ವಿಕ್ರಮ್ ಕುತೂಹಲದಿಂದ ಅವನ ಹತ್ತಿರ ಹೋಗಿ ವಿಚಾರಿಸಿದರು. "ಏನಪ್ಪಾ ಮುತ್ತಪ್ಪ, ವ್ಯಾಪಾರ ಹೇಗಿದೆ? ಮುತ್ತಪ್ಪ ನಿಟ್ಟುಸಿರು ಬಿಟ್ಟು ಹೇಳಿದ, "ಸಾಹೇಬ್ರೇ, ಜನರಿಗೆ ಐನೂರು ರೂಪಾಯಿ ಹೆಲ್ಮೆಟ್ ತಗೊಳ್ಳೋಕೆ ಮನಸ್ಸಿಲ್ಲ, ಆದ್ರೆ ಸಾವಿರ ರೂಪಾಯಿ ಫೈನ್ ಕಟ್ಟೋಕೆ ರೆಡಿ ಇದ್ದಾರೆ. ವ್ಯಾಪಾರವಿಲ್ಲದೆ ಮಗನ ಶಾಲಾ ಫೀಸ್ ಕಟ್ಟಲು ದಾರಿಯಿಲ್ಲದೆ ಇಲ್ಲಿ ಕುಳಿತಿದ್ದೇನೆ.
 ವಿಕ್ರಮ್‌ಗೆ ಆಗಲೇ ಆ ಮಾಸ್ಟರ್ ಪ್ಲಾನ್ ಹೊಳೆದಿದ್ದು. ಮುತ್ತಪ್ಪ, ನಿನ್ನ ಸೈಕಲ್ ಎತ್ತು, ಇವತ್ತಿನಿಂದ ನಿನ್ನ ಅಂಗಡಿ ನನ್ನ ಚೆಕ್-ಪೋಸ್ಟ್ ಪಕ್ಕದಲ್ಲೇ ಇರಲಿ ಎಂದು ಗುಡುಗಿದರು.
 
ಮರುದಿನ ಬೆಳಿಗ್ಗೆ ಮಂಗಳೂರಿನ ರಸ್ತೆಯಲ್ಲಿ ಒಂದು ವಿಚಿತ್ರ ದೃಶ್ಯ ಕಂಡುಬಂತು. ವಿಕ್ರಮ್ ತನ್ನ ತಂಡದೊಂದಿಗೆ ಚೆಕ್ಕಿಂಗ್ ನಡೆಸುತ್ತಿದ್ದರು, ಆದರೆ ಅವರ ಪಕ್ಕದಲ್ಲೇ ಮುತ್ತಪ್ಪನ ಹೆಲ್ಮೆಟ್ ಅಂಗಡಿ ಇತ್ತು ಮತ್ತು ಅದರ ಪಕ್ಕದಲ್ಲಿ ಇನ್ಸೂರೆನ್ಸ್ ಏಜೆಂಟ್ ರಾಘವನ ಕೌಂಟರ್ ಇತ್ತು. ಒಬ್ಬ ಯುವಕ ಹೆಲ್ಮೆಟ್ ಇಲ್ಲದೆ ಅತೀ ವೇಗವಾಗಿ ಬಂದ. ವಿಕ್ರಮ್ ಅವನನ್ನು ಅಡ್ಡಗಟ್ಟಿದಾಗ ಅವನು ಎಂದಿನಂತೆ ಸಾರ್, ಫೈನ್ ಕಟ್ತೀನಿ ಬಿಟ್ಟುಬಿಡಿ ಅಂದ.
 ವಿಕ್ರಮ್ ಗರ್ಜಿಸಿದರು, "ಇಲ್ಲಿ ಕೇಳೋ ತಮ್ಮ, ನೀನು ಒಂದು ಸಾವಿರ ರೂಪಾಯಿ ದಂಡ ಕಟ್ಟಿದರೆ ಆ ಹಣ ಸರ್ಕಾರಕ್ಕೆ ಹೋಗುತ್ತೆ. ಅದರಿಂದ ನಿನ್ನ ತಲೆಗೆ ರಕ್ಷಣೆ ಸಿಗಲ್ಲ. ಅದರ ಬದಲು, ಇಲ್ಲೇ ಪಕ್ಕದಲ್ಲಿ ಮುತ್ತಪ್ಪ ಇದ್ದಾನೆ, ಅವನ ಹತ್ತಿರ ಒಂದು ಬ್ರಾಂಡೆಡ್ ಹೆಲ್ಮೆಟ್ ತಗೋ. ಇನ್ಸೂರೆನ್ಸ್ ಇಲ್ಲದಿದ್ದರೆ ಇಲ್ಲೇ ರಾಘವನ ಹತ್ತಿರ ಮಾಡಿಸಿಕೊ. ನಿನ್ನ ಸಾವಿರ ರೂಪಾಯಿಯಲ್ಲಿ ನಿನಗೆ ಜೀವದ ಗ್ಯಾರಂಟಿ ಸಿಗುತ್ತೆ, ಇನ್ಸೂರೆನ್ಸ್ ಕೂಡ ಆಗುತ್ತೆ. ಹೆಲ್ಮೆಟ್ ಹಾಕೊಂಡೇ ಇಲ್ಲಿಂದ ಹೋಗ್ಬೇಕು, ಇಲ್ಲದಿದ್ರೆ ಗಾಡಿ ಸೀಜ್ ಮಾಡ್ತೀನಿ ಆ ಯುವಕನಿಗೆ ಈ ವ್ಯವಹಾರ ಲಾಭದಾಯಕ ಎನಿಸಿತು. ದಂಡ ಕಟ್ಟುವ ಬದಲು ಸುರಕ್ಷತಾ ಕವಚವನ್ನೇ ಧರಿಸಿ ಅವನು ಹೊರಟಾಗ, ರಸ್ತೆಯಲ್ಲಿದ್ದ ಜನರೆಲ್ಲಾ ಅಚ್ಚರಿಯಿಂದ ನೋಡತೊಡಗಿದರು.
ದಿನಗಳು ಕಳೆದಂತೆ ಈ ಸುದ್ದಿ ಮಂಗಳೂರಿನಾದ್ಯಂತ ಕಾಳ್ಗಿಚ್ಚಿನಂತೆ ಹರಡಿತು. ಮೊದಲು ಪೊಲೀಸರನ್ನು ಕಂಡರೆ ಹಣ ಪೀಕುವವರು" ಎಂದು ಬಯ್ಯುತ್ತಿದ್ದ ಜನರ ಮನಸ್ಸು ಮೆಲ್ಲನೆ ಬದಲಾಗತೊಡಗಿತು. ವಿಕ್ರಮ್ ಸಿಂಹ ಅವರಿಗೆ ಜನರ ಪ್ರಾಣದ ಮೇಲೆ ಎಷ್ಟು ಕಾಳಜಿಯಿದೆ ಎಂಬುದು ಎಲ್ಲರಿಗೂ ಅರ್ಥವಾಯಿತು. ಮುತ್ತಪ್ಪನ ಬಿಸಿನೆಸ್ ರಾಕೆಟ್ ವೇಗದಲ್ಲಿ ಬೆಳೆಯಿತು. ತಿಂಗಳಿಗೆ ಹತ್ತು ಹೆಲ್ಮೆಟ್ ಮಾರಲಾಗದವನು, ದಿನಕ್ಕೆ ನೂರಾರು ಹೆಲ್ಮೆಟ್ ಮಾರತೊಡಗಿದ. ಮುತ್ತಪ್ಪನ ಕಣ್ಣೀರು ಮಾಯವಾಗಿತ್ತು, ಅವನ ಬದುಕಿಗೆ ಗೌರವ ಸಿಕ್ಕಿತ್ತು.
 ಪೋಲೀಸ್ ಇಲಾಖೆಯ ಬಗ್ಗೆ ಇದ್ದ ಕಹಿ ಭಾವನೆ ಹೋಗಿ, "ರಕ್ಷಕರು" ಎಂಬ ಹೆಮ್ಮೆಯ ಭಾವನೆ ಮೂಡಿತು. 
ಪೋಲಿಸರನ್ನು ಗೌರವದಿಂದ ಕಾಣಲು ಪ್ರಾರಂಭಿಸಿದರು. ಸವಾರರು ಈಗ ದಂಡದ ಭಯಕ್ಕೆ ಹೆಲ್ಮೆಟ್ ಹಾಕುತ್ತಿರಲಿಲ್ಲ, ಬದಲಾಗಿ ಆ ಅಧಿಕಾರಿಯ ಮೇಲಿನ ಗೌರವಕ್ಕೆ ಮತ್ತು ತಮ್ಮ ಕುಟುಂಬದ ಸುರಕ್ಷತೆಗಾಗಿ ಹಾಕತೊಡಗಿದರು. ಇವರ ಒಂದು ಕ್ರಮಬದ್ಧ ಕಾರ್ಯದಿಂದ ದೇಶದ ಇತಿಹಾಸದಲ್ಲಿ ಮೊದಲ ಬಾರಿಗೆ ಮಂಗಳೂರಿನಲ್ಲಿ ಟ್ರ್ಯಾಫಿಕ್ ನ ಪ್ರಕರಣಗಳು ಝೀರೋ ಗೆ ತಲುಪಿದವು. ಮಂಗಳೂರಿನ ರಸ್ತೆಯಲ್ಲಿ ವಿಕ್ರಂ ಸಿಂಹ ಈಗ ಕೇವಲ ಒಬ್ಬ ಪೋಲಿಸ್ ಆಗಿರಲಿಲ್ಲ. ಬದಲಾಗಿ ಒಬ್ಬ ಕ್ರಾಂತಿಕಾರಿ ನಾಯಕನಂತೆ ಕಂಡರು. ಇವರ ವಿಶಿಷ್ಟ ಕಾರ್ಯವೈಖರಿ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆಯಾಗಿ, ಈ ಸುದ್ದಿ ವಿಧಾನಸೌಧದ ಮೆಟ್ಟಿಲೇರಿತು. ಇದನ್ನು ಗಮನಿಸಿದ ರಾಜ್ಯದ ಗೃಹ ಸಚಿವರು ಕುತೂಹಲ ತಡೆಯಲಾರದೆ ವೇಷ ಬದಲಿಸಿ ಮಂಗಳೂರಿಗೆ ಭೇಟಿ ನೀಡಿದರು. ಸಾಮಾನ್ಯ ಸವಾರನಂತೆ ಹೆಲ್ಮೆಟ್ ಇಲ್ಲದೆ ಬಂದ ಸಚಿವರನ್ನು ವಿಕ್ರಮ್ ಸಿಂಹ ಅಡ್ಡಗಟ್ಟಿದರು. ಟ್ರಾಫಿಕ್ ರೂಲ್ಸ್ ಬಗ್ಗೆ ತಿಳುವಳಿಕೆ ನೀಡಿ ಅದೇ ರೀತಿ ಮುತ್ತಪ್ಪನ ಬಳಿ ಹೆಲ್ಮೆಟ್ ಕೊಡಿಸಲು ಮುಂದಾದಾಗ, ಸಚಿವರು ನಾನಾ ರೀತಿಯ ಆಮೀಷವನ್ನು ತೋರಿಸಿದರೂ ಬಗ್ಗದೆ ಶಾಂತತೆ ಯಿಂದ ವರ್ತಿಸುತ್ತಿದ್ದಾಗ ಸಚಿವರು ತಮ್ಮ ಗುರುತನ್ನು ತೋರಿಸಿ ಅವರ ಕೈ ಕುಲುಕುತ್ತ ವಿಕ್ರಮ್, ನೀವು ಕೇವಲ ಟ್ರಾಫಿಕ್ ಕಂಟ್ರೋಲ್ ಮಾಡ್ತಿಲ್ಲ, ಜನರ ಬದುಕನ್ನು ಬದಲಾಯಿಸುತ್ತಿದ್ದೀರಿ ಇದು ಇಡೀ ದೇಶಕ್ಕೆ ಮಾದರಿ ಎಂದು ಘೋಷಿಸಿದರು.
ಗ್ರಹ ಸಚಿವರು ಅಲ್ಲಿಯೇ ಇದ್ದ ಮುತ್ತಪ್ಪ ನನ್ನು ನೋಡುತ್ತಾ ಏನು ಮುತ್ತಪ್ಪ ವ್ಯಾಪಾರ ಹೇಗಿದೆ? ಮುತ್ತಪ್ಪ ಅಯ್ಯ ಇವತ್ತು ನನ್ನ ಕುಟುಂಬ ಎರಡು ಹೊತ್ತು ನೆಮ್ಮದಿಯಾಗಿ ಊಟ ಮಾಡ್ತಾ ಇದೆ ಅಂದರೆ ಇದಕ್ಕೆ ಈ ಸಾಹೇಬ್ರು ಕಾರಣ ಮೇಲಾಗಿ ಎಷ್ಟೋ ಜನರ ಜೀವ ಉಳಿಸಿದ ಪುಣ್ಯಾತ್ಮ ಈ ಸಾಹೇಬರು ಎಂದು ಗ್ರಹ ಸಚಿವರ ಮುಂದೆ ಹೇಳಿದಾಗ ಗುಡ್ ವರ್ಕ್ ವಿಕ್ರಂ ಎಂದು ಹೇಳಿ ಹೊರಟರು.
 ಇವರ ಉತ್ತಮ ‌ಸಾಧನೆಯನ್ನು ಗುರುತಿಸಿ ರಾಜ್ಯ ಸರ್ಕಾರವು ವಿಕ್ರಮ್ ಅವರಿಗೆ ಮುಖ್ಯಮಂತ್ರಿಗಳ ಚಿನ್ನದ ಪದಕ ನೀಡಿ ಗೌರವಿಸುವುದಾಗಿ ಘೋಷಿಸಿತು. ಬೆಂಗಳೂರಿನ ರಾಜಭವನದಲ್ಲಿ ನಡೆದ ಅದ್ಧೂರಿ ಸಮಾರಂಭದಲ್ಲಿ ಮಿನಿಸ್ಟರ್ ಅವರು ವಿಕ್ರಮ್ ಅವರಿಗೆ ಪದಕ ತೊಡಿಸಿದರು. ಗ್ರಹ ಸಚಿವರು ವೇದಿಕೆಯಲ್ಲಿ ಮಾತನಾಡುತ್ತಾ ವಿಕ್ರಂ ಇಡೀ ಪೋಲೀಸ್ ಇಲಾಖೆಗೆ ಮಾದರಿ, ಕಾನೂನನ್ನು ಲಾಠಿಯಿಂದ ಜಾರಿಗೆ ತರುವುದಕ್ಕಿಂತ ಪ್ರೀತಿ ಮತ್ತು ಬುದ್ಧಿವಂತಿಕೆಯಿಂದ ಹೇಗೆ ಜಾರಿಗೊಳಿಸಿ ಬಹುದನ್ನು ತೋರಿಸಿದ್ದಾರಲ್ಲದೆ ಒಬ್ಬ ಟ್ರ್ಯಾಫಿಕ್ ಪೋಲಿಸ್ ಅಂದರೆ ದಂಡ ಹಾಕುವವನಲ್ಲ, ಬದಲಾಗಿ ಬಡವರ ಬದುಕಿಗೆ ಆಸರೆಯಾಗಿ ಜೀವ ರಕ್ಷಿಸುವವನು ಎಂಬುದನ್ನು ಸಹ ಸಾಬೀತು ಮಾಡಿದ್ದಾರೆ ಎಂದರು.
ಇಂದಿನಿಂದ ಈ ಹೆಲ್ಮೆಟ್ ಮತ್ತು ಇನ್ಸೂರೆನ್ಸ್ ಕೌಂಟರ್ ವ್ಯವಸ್ಥೆಯು ರಾಜ್ಯದ ಪ್ರತಿಯೊಂದು ಚೆಕ್ ಪೋಸ್ಟ್ ನಲ್ಲಿ ಜಾರಿಗೆ ಬರಲಿದೆ ಎಂದು ಸಹ ಘೋಷಿಸಿದರು. ಸಮಾರಂಭದ ಗ್ಯಾಲರಿಯಲ್ಲಿ ಮುತ್ತಪ್ಪ ಮಗನೊಂದಿಗೆ ಕುಳಿತಿದ್ದ, ಅವನ ಕಣ್ಣಲ್ಲಿ ಧನ್ಯತೆಯ ಕಣ್ಣೀರಿತ್ತು.
 ವಿಕ್ರಮ್ ಮಂಗಳೂರಿಗೆ ಮರಳಿದಾಗ ಜನರು ಅವರಿಗೆ ಹೂಮಳೆಗರೆದು ಸ್ವಾಗತಿಸಿದರು. ಪೋಲೀಸರ ಬಗ್ಗೆ ಇದ್ದ ತಪ್ಪು ಅಭಿಪ್ರಾಯ ಸಂಪೂರ್ಣವಾಗಿ ಮಾಯವಾಗಿತ್ತು. ಮುತ್ತಪ್ಪ ಈಗ ದೊಡ್ಡ ಅಂಗಡಿಯ ಮಾಲೀಕನಾಗಿದ್ದರೂ, ವಿಕ್ರಮ್ ಅವರು ಚೆಕ್ಕಿಂಗ್ ಮಾಡುವ ಸ್ಥಳಕ್ಕೆ ಬಂದು ಹೊಸ ಸವಾರರಿಗೆ ತಿಳುವಳಿಕೆ ಹೇಳುತ್ತಿದ್ದ.
 ಕೊನೆಯಲ್ಲಿ, ವಿಕ್ರಮ್ ತನ್ನ ಬೈಕ್ ಹತ್ತಿ ಹೆಲ್ಮೆಟ್ ಹಾಕಿಕೊಳ್ಳುವಾಗ, ರಸ್ತೆಯಲ್ಲಿ ಹೋಗುವ ಸಣ್ಣ ಮಗುವೊಂದು ತನ್ನ ತಂದೆಗೆ ಹೇಳುತ್ತಿತ್ತು, ಅಪ್ಪಾ, ನಾನೂ ಆ ಪೋಲೀಸ್ ಮಾಮನ ತರ ಒಳ್ಳೆಯ ಕೆಲಸ ಮಾಡ್ತೀನಿ. ವಿಕ್ರಮ್ ಆ ಮಗುವನ್ನು ನೋಡಿ ನಗುತ್ತಾ ತನ್ನ ಬೈಕ್ ಸ್ಟಾರ್ಟ್ ಮಾಡಿದರು. ಈಗ ಅವರ ಎದೆಯ ಮೇಲೆ ಪದಕವಿತ್ತು, ಆದರೆ ಅದಕ್ಕಿಂತ ದೊಡ್ಡದಾದ ಜನರ ಪ್ರೀತಿ ಮತ್ತು ಸಮಾಜದಲ್ಲಿ ಬಂದ ಬದಲಾವಣೆಯ ತೃಪ್ತಿ ಅವರ ಮುಖದಲ್ಲಿ ಬೆಳಗುತ್ತಿತ್ತು.

ಈ ಕಥೆಯ ಬಗ್ಗೆ ನಿಮ್ಮ ಅಭಿಪ್ರಾಯವೇನು?