BBM in Kannada Drama by Danger Writer books and stories PDF | BBM

Featured Books
Categories
Share

BBM

ಬೆಂಗಳೂರಿನ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಆ ಗದ್ದಲದ ಟರ್ಮಿನಲ್ ನಡುರಾತ್ರಿಯಲ್ಲೂ ಜನರಿಂದ ತುಂಬಿತ್ತು. ವಿಮಾನಗಳ ಹಾರಾಟದ ಅನೌನ್ಸ್‌ಮೆಂಟ್‌ಗಳು ನಿರಂತರವಾಗಿ ಕೇಳಿಸುತ್ತಿದ್ದವು. ಅಲ್ಲಿನ ವಿಐಪಿ ಲಾಂಜ್‌ನ ಮೂಲೆಯ ಸೀಟಿನಲ್ಲಿ ರಘುರಾಮ್ ಕುಳಿತಿದ್ದಾಗ, ಅವನ ಕಣ್ಣುಗಳಲ್ಲಿ ಸೌಮ್ಯತೆಯ ಸಣ್ಣ ಲಕ್ಷಣವೂ ಇರಲಿಲ್ಲ. ಅವನ ಹಣೆಯ ಮೇಲಿನ ನರಗಳು ಬಿಗಿದುಕೊಂಡಿದ್ದವು. ಅವನ ಬಲಗೈ ಬೆರಳುಗಳು ತಾನು ಹಿಡಿದುಕೊಂಡಿದ್ದ ಕಪ್ಪು ಚರ್ಮದ ಡೈರಿಯ ಪುಟಗಳನ್ನು ಜೋರಾಗಿ ತಿರುವುತ್ತಿದ್ದವು. ವಿಚಿತ್ರವೆಂದರೆ, ಆ ಡೈರಿಯ ಪ್ರತಿಯೊಂದು ಪುಟದ ತಲೆಯ ಮೇಲೂ, ಕೆಂಪು ಶಾಯಿಯಿಂದ ದಪ್ಪನೆಯ ದೊಡ್ಡ ಅಕ್ಷರಗಳಲ್ಲಿ ಮೂರೇ ಮೂರು ಅಕ್ಷರಗಳನ್ನು ಬರೆಯಲಾಗಿತ್ತು. BBM.
   ಆ ಅಕ್ಷರಗಳ ಕೆಳಗೆ ಲಕ್ಷಾಂತರ ರೂಪಾಯಿಗಳ ಆರ್ಥಿಕ ಲೆಕ್ಕಾಚಾರ, ಕೆಲವು ನಿಗೂಢ ದಿನಾಂಕಗಳು ಮತ್ತು ಇಡೀ ಬೆಂಗಳೂರು ನಗರದ ಮ್ಯಾಪ್‌ನ ಕೆಲವು ನಿರ್ದಿಷ್ಟ ಏರಿಯಾಗಳ ಮಾರ್ಕಿಂಗ್‌ಗಳಿದ್ದವು. ಕಳೆದ ಆರು ತಿಂಗಳಿನಿಂದ ರಘುರಾಮ್‌ಗೆ ಸರಿಯಾಗಿ ನಿದ್ದೆಯಿರಲಿಲ್ಲ, ತಿಂದ ಅನ್ನ ಮೈಗೆ ಹತ್ತುತ್ತಿರಲಿಲ್ಲ. ಅವನ ಮಿದುಳಿನ ಪ್ರತಿಯೊಂದು ಜೀವಕೋಶವೂ, ಪ್ರತಿಯೊಂದು ಆಲೋಚನೆಯೂ ಆ BBM ಎಂಬ ನಿಗೂಢ ಸಂಕೇತದ ಸುತ್ತಲೇ ಸತತವಾಗಿ ಸುತ್ತುತ್ತಿತ್ತು.
ರಘು, ನೀನು ಇನ್ನು ಎಷ್ಟು ದಿನ ಆ BBM ಜಾಲದಲ್ಲೇ ಬದುಕಿರುತ್ತೀಯಾ? ಹಗಲು ರಾತ್ರಿ ಅನ್ನದೆ, ತಿನ್ನುವ ತಟ್ಟೆ ಮುಂದಿಟ್ಟುಕೊಂಡೂ ಕೈಯಲ್ಲೊಂದು ಡೈರಿ ಹಿಡಿದು ಹುಚ್ಚನಂತೆ ಇಡೀ ನಗರ ಅಲೆಯುತ್ತಿದ್ದೀಯಲ್ಲ. ನಮ್ಮ ಇಡೀ ಫೈನಾನ್ಸ್ ಕಂಪನಿಯ ಇತಿಹಾಸದಲ್ಲೇ ಯಾರೂ ಭೇದಿಸಲು ಸಾಧ್ಯವಾಗದ ಯಾವ ನಿಗೂಢ ಸೈಬರ್ ಕ್ರೈಮ್, ಹವಾಲಾ ದಂಧೆನಾ ಅಥವಾ ಅಂತರರಾಷ್ಟ್ರೀಯ ಅಂಡರ್‌ವರ್ಲ್ಡ್ ಡೀಲಾ ಇದು? ಇದರ ಹಿಂದೆ ಯಾವ ದೊಡ್ಡ ಗ್ಯಾಂಗ್ ಇದೆ? ಅಸಲಿ ವಿಷಯನಾದರೂ ಏನು? ಎಂದು ಅವನ ಆಪ್ತ ಸಹೋದ್ಯೋಗಿ ಮತ್ತು ಕಂಪನಿಯ ಲೀಗಲ್ ಅಡ್ವೈಸರ್ ಪ್ರಕಾಶ್ ಹಲವು ಬಾರಿ ಆತಂಕದಿಂದಲೇ ಕೇಳಿದ್ದ. 
ಆದರೆ ರಘುರಾಮ್ ಮಾತ್ರ ಹಲ್ಲು ಕಚ್ಚಿ, ತನ್ನ ಸಿಗರೇಟ್ ಹೊಗೆಯನ್ನು ಆಕಾಶಕ್ಕೆ ಬಿಡುತ್ತಾ, ಆ 'BBM' ನನ್ನು ಹಿಡಿದು ಅವನ ಚರ್ಮ ಸುಲಿಯುವವರೆಗೂ ನನಗೆ ಈ ಜನ್ಮದಲ್ಲಿ ಶಾಂತಿಯಿಲ್ಲ ಪ್ರಕಾಶ್. ಅವನೇ ನನ್ನ ಇಡೀ ನೆಮ್ಮದಿಯನ್ನು ನುಂಗಿದ ಮಾಫಿಯಾ ಎಂದು ಗಂಭೀರವಾಗಿ ಹೇಳುತ್ತಿದ್ದನೇ ಹೊರತು, ಆ ಶಬ್ದದ ನಿಜವಾದ ಅಂತರಾರ್ಥವನ್ನಾಗಲಿ ಅಥವಾ ಆ ವ್ಯಕ್ತಿಯ ಅಸಲಿ ಹೆಸರನ್ನಾಗಲಿ ಇಲಾಖೆಯ ಯಾರಿಗೂ ಬಿಟ್ಟುಕೊಡುತ್ತಿರಲಿಲ್ಲ.
ಅವನ ದಿನಚರಿ ಪ್ರತಿಕ್ಷಣವೂ ಆ ಡೈರಿಯ ಅಂಕಿಗಳ ಬೆನ್ನಟ್ಟುವುದೇ ಆಗಿತ್ತು. ರಘುರಾಮ್ ಸದಾ ಹಳೆಯ ಮಾರುತಿ ಸ್ವಿಫ್ಟ್ ಕಾರನ್ನು ಹಿಡಿದುಕೊಂಡು ನಗರದ ಅತ್ಯಂತ ಕಿರಿದಾದ ಗಲ್ಲಿಗಳಿಗೆ, ಕೆಂಗೇರಿಯ ಹಳೆಯ ಗ್ಯಾರೇಜ್‌ಗಳಿಗೆ, ಹೆಬ್ಬಾಳದ ಅನಾಮಧೇಯ ಹೋಟೆಲ್‌ಗಳಿಗೆ ಹೋಗಿ ಗಂಟೆಗಟ್ಟಲೆ ನಿಂತು ಯಾರನ್ನೋ ತೀಕ್ಷ್ಣವಾಗಿ ಹುಡುಕುತ್ತಿದ್ದ. ಅವನ ಮೊಬೈಲ್‌ಗೆ ದಿನದ ಬೇರೆ ಬೇರೆ ಸಮಯದಲ್ಲಿ ವಿಚಿತ್ರವಾದ ಲೊಕೇಶನ್ ಅಲರ್ಟ್‌ಗಳು ಬರುತ್ತಿದ್ದವು. ಆ ನೋಟಿಫಿಕೇಶನ್ ಬಂದ ತಕ್ಷಣ ರಘುರಾಮ್‌ನ ಬಿಪಿ ಶರವೇಗದಲ್ಲಿ ಏರುತ್ತಿತ್ತು. ಅವನ ಕಣ್ಣುಗಳು ರಕ್ತದಂತೆ ಕೆಂಪಗಾಗುತ್ತಿದ್ದವು.
ಅಕ್ಟೋಬರ್ ತಿಂಗಳ ಆ ಕರಾಳ ಶನಿವಾರದ ರಾತ್ರಿ ಬಿರುಗಾಳಿಯೊಂದಿಗೆ ಭೀಕರವಾಗಿ ಮಳೆ ಸುರಿಯುತ್ತಿತ್ತು. ಇಡೀ ಬೆಂಗಳೂರಿನ ರಸ್ತೆಗಳು ಜಲಾವೃತವಾಗಿದ್ದವು. ರಘುರಾಮ್ ತನ್ನ ಕಾರನ್ನು ನಗರದ ಅತ್ಯಂತ ಹೊರವಲಯದಲ್ಲಿದ್ದ, ಸುತ್ತಲೂ ಮುಳ್ಳುಕಂಟಿಗಳಿಂದ ಆವೃತವಾಗಿದ್ದ ಒಂದು ಸಣ್ಣ, ಜನರಿಲ್ಲದ ಮುಚ್ಚಿದ ಹಳೆಯ ಮೆಕ್ಯಾನಿಕಲ್ ಗ್ಯಾರೇಜ್‌ನ ಮುಂದೆ ಬಂದು ತಟ್ಟನೆ ನಿಲ್ಲಿಸಿದ. ಕಾರಿನ ಹೆಡ್‌ಲೈಟ್ ಬೆಳಕಿನಲ್ಲಿ ಮಳೆಯ ದಪ್ಪನೆಯ ಹನಿಗಳು ಹಾವಿನಂತೆ ಬೀಳುತ್ತಿರುವುದು ಸ್ಪಷ್ಟವಾಗಿ ಕಾಣಿಸುತ್ತಿತ್ತು. ಕಾರಿನಿಂದ ಕೆಳಗಿಳಿಯುವ ಮುನ್ನ ರಘುರಾಮ್ ತನ್ನ ಸೀಟಿನ ಕೆಳಗಿದ್ದ ದಪ್ಪನೆಯ, ತೂಕದ ಕಬ್ಬಿಣದ ರಾಡನ್ನು ಕೈಗೆತ್ತಿಕೊಂಡ. ಅವನ ಕಣ್ಣುಗಳಲ್ಲಿ ಒಬ್ಬ ಕ್ರೂರ ಬೇಟೆಗಾರನ ರೌದ್ರತೆ ತುಂಬಿತ್ತು. ಇಂದು ಆರು ತಿಂಗಳ ಸುದೀರ್ಘ ಹುಡುಕಾಟದ ಆ BBM ಮಿಷನ್ ಅಂತಿಮ ಘಟ್ಟ ತಲುಪಿತ್ತು.
ಅವನು ಮಳೆಯಲ್ಲಿ ನೆನೆಯುತ್ತಾ ನಡೆದು ಬಂದು, ಆ ಹಳೆಯ ಗ್ಯಾರೇಜ್‌ನ ಮುರಿದ ಮರದ ಬಾಗಿಲನ್ನು ತನ್ನ ಬೂಟುಗಾಲಿನಿಂದ ಜೋರಾಗಿ ಒದ್ದು ಒಳಗೆ ನುಗ್ಗಿದ. ಪ್ರಕಾಶ್ ಕೂಡ ಹೆದರುತ್ತಲೇ ಅವನ ಹಿಂದೆ ಗನ್ ಹಿಡಿದು ಓಡಿಬಂದ.
ಒಳಗಡೆ ಕತ್ತಲೆಯ ಮೂಲೆಯಲ್ಲಿ, ಇಂಜಿನ್ ಆಯಿಲ್ ಡಬ್ಬಿಗಳ ನಡುವೆ ಒಬ್ಬ ವ್ಯಕ್ತಿ ಹರಕು ಶರ್ಟ್ ಧರಿಸಿ, ಹೆದರಿ ಇಡೀ ದೇಹ ನಡುಗುತ್ತಾ ಕುಳಿತಿದ್ದ. ಅವನ ಮುಖದ ಮೇಲೆ ಜಿಡ್ಡು ತುಂಬಿತ್ತು, ಕಣ್ಣುಗಳಲ್ಲಿ ಪ್ರಾಣಭಯ ಎದ್ದು ಕಾಣಿಸುತ್ತಿತ್ತು. ರಘುರಾಮ್ ಸಿಂಹದಂತೆ ನಡೆದು ಬಂದು ತಕ್ಷಣ ಆ ವ್ಯಕ್ತಿಯ ಶರ್ಟ್ ಕಾಲರ್ ಅನ್ನು ತನ್ನ ಬಲಿಷ್ಠ ಕೈಗಳಿಂದ ಗಟ್ಟಿಯಾಗಿ ಹಿಡಿದು ಮೇಲಕ್ಕೆತ್ತಿ ಗೋಡೆಗೆ ಚಚ್ಚಿದ. ಅವನ ಮುಖದ ಮುಂದೆ ತನ್ನ ಆ ಕಪ್ಪು ಡೈರಿಯನ್ನು ಜೋರಾಗಿ ಬೀಸಿದ.
ಏನೋ ಅಂದುಕೊಂಡಿದ್ದೀಯಾ ಮಗನೇ? ಸಿಮ್ ಕಾರ್ಡ್ ಕಿತ್ತೆಸೆದು, ಆಧಾರ್ ಕಾರ್ಡ್ ಬ್ಲಾಕ್ ಮಾಡಿ, ಈ ಕತ್ತಲೆ ಗ್ಯಾರೇಜ್‌ನಲ್ಲಿ ಬಂದು ಇಲಿಯಂತೆ ಅಡಗಿಕೊಂಡರೆ ಈ ರಘುರಾಮ್ ಕಣ್ಣಿನಿಂದ ತಪ್ಪಿಸಿಕೊಳ್ಳಬಹುದು ಅಂದುಕೊಂಡಿದ್ದಾ? ರಘುರಾಮ್‌ನ ಧ್ವನಿ ಇಡೀ ಕಾಂಕ್ರೀಟ್ ರೂಮ್‌ನಲ್ಲಿ ಗುಡುಗಿನಂತೆ ಪ್ರತಿಧ್ವನಿಸಿತು. ಅವನ ಜೊತೆಗೆ ಓಡಿ ಬಂದಿದ್ದ ಪ್ರಕಾಶ್ ಇಡೀ ಕೋಣೆಯನ್ನು ನೋಡಿ ಗಾಬರಿಯಿಂದ ಕೇಳಿದ, ರಘು ಯಾರು ಇವನು? ಇವನೇನಾ ಆ ನೂರಾರು ಕೋಟಿ ಲೂಟಿ ಮಾಡಿದ ಅಂತರರಾಷ್ಟ್ರೀಯ ಸೈಬರ್ ಹ್ಯಾಕರ್? ಇವನ ದೊಡ್ಡ ಕ್ರಿಮಿನಲ್ ನೆಟ್‌ವರ್ಕ್ ಕೋಡ್ ನೇಮ್‌ಗಾಗಿಯೇ ನೀನು ಇಷ್ಟು ದಿನ 'BBM, BBM' ಅಂತ ಡೈರಿಯಲ್ಲಿ ಬರೆದು ಇಡೀ ದೇಶ ಸುತ್ತುತ್ತಿದ್ದುದು? ಇವನ ಅಸಲಿ ಹೆಸರೇನು ರಘು?
ಆಗ ರಘುರಾಮ್ ಜೋರಾಗಿ, ಇಡೀ ಆಸ್ಪತ್ರೆಯ ನರಕದಂತೆ ಅಟ್ಟಹಾಸದಿಂದ ನಗಲಾರಂಭಿಸಿದ. ಆ ನಗುವಿನಲ್ಲಿ ತೀವ್ರವಾದ ಆಕ್ರೋಶ, ನಷ್ಟದ ಯಾತನೆ ಮತ್ತು ಕಟುವಾದ ವ್ಯಂಗ್ಯ ತುಂಬಿತ್ತು.
ಹೌದು ಪ್ರಕಾಶ್ ಇವನೇ ಆ ಮಹಾನ್ ಅಂತರರಾಷ್ಟ್ರೀಯ ವ್ಯಕ್ತಿ, ಇವನಿಗೆ  ನಮ್ಮ ಬ್ಯಾಂಕ್ ಮ್ಯಾನೇಜರ್‌ನ ಒಪ್ಪಿಸಿ 20 ಲಕ್ಷ ರೂಪಾಯಿ ಹ್ಯಾಂಡ್ ಲೋನ್ ಕೊಟ್ಟಿದ್ದೆ. ಸಾಲ ತೆಗೊಂಡು ಆರು ತಿಂಗಳಾದರೂ ಇವನು ಒಂದು ರೂಪಾಯಿ ಬಡ್ಡಿಯನ್ನೂ ಕಟ್ಟಲಿಲ್ಲ, ಅಸಲನ್ನೂ ಕೊಡಲಿಲ್ಲ, ಕೇಳಲು ಹೋದರೆ ನನ್ನ ಫೋನನ್ನೇ ಬ್ಲಾಕ್ ಮಾಡಿ, ಊರು ಬಿಟ್ಟು ಬಂದು ಇಲ್ಲಿ ಗ್ಯಾರೇಜ್‌ನಲ್ಲಿ ಅಡಗಿ ಕುಳಿತಿದ್ದಾನೆ. 
ರಘುರಾಮ್ ಆ ವ್ಯಕ್ತಿಯ ಕೆನ್ನೆಗೆ ಮತ್ತೊಂದು ಬಿಗಿಯಾದ ಏಟು ನೀಡಿ ಪ್ರಕಾಶ್‌ನ ಕಡೆಗೆ ತಿರುಗಿ ಮುಂದುವರಿಸಿದ.
ನಾನು ಇಷ್ಟು ದಿನ ಡೈರಿಯಲ್ಲಿ ಬರೆಯುತ್ತಿದ್ದ ಆ 'BBM' ಯಾವುದೇ ದೊಡ್ಡ ಮಿಷನ್ ಅಲ್ಲ ಪ್ರಕಾಶ್, ಯಾವುದೇ ವಿಜ್ಞಾನದ ಕೋಡ್ ಅಲ್ಲ, ಅಥವಾ ಯಾವುದೇ ಅಂತರರಾಷ್ಟ್ರೀಯ ಹ್ಯಾಕರ್ ಹೆಸರೂ ಅಲ್ಲ. ಇವನ ಯೋಗ್ಯತೆಗೆ, ಸಾಲ ತಗೊಂಡು ನಾಪತ್ತೆಯಾದ ಇವನ ಭಂಡತನಕ್ಕೆ ನಾನು ಇಟ್ಟಿರುವ ಅಪ್ಪಟ ಕನ್ನಡದ ಶಾರ್ಟ್ ಫಾರ್ಮ್ BBM ಅಲಿಯಾಸ್ ಭಂಡ ಬಡ್ಡಿ ಮಗ.
ಪ್ರಕಾಶ್ ಒಂದು ಕ್ಷಣ ಉಸಿರು ನಿಂತಂತೆ, ಇಡೀ ದೇಹ ಪಾರ್ಶ್ವವಾಯು ಹೊಡೆದಂತೆ ಸ್ತಬ್ಧನಾಗಿ ನಿಂತುಬಿಟ್ಟ. ಅವನ ಉನ್ನತ ಮಿದುಳು ಸಂಪೂರ್ಣವಾಗಿ ಗೊಂದಲದ ಮತ್ತು ಆಘಾತದ ಸುಳಿಗೆ ಸಿಲುಕಿತು. ಅವನು ಇಷ್ಟು ದಿನ ಇಲಾಖೆಯ ಅತ್ಯಂತ ರಹಸ್ಯವಾದ, ದೇಶದ ಭದ್ರತೆಗೆ ಸಂಬಂಧಿಸಿದ ದೊಡ್ಡ ಸಸ್ಪೆನ್ಸ್ ಥ್ರಿಲ್ಲರ್ ಕೇಸ್ ಅಂದುಕೊಂಡಿದ್ದ ಆ BBM ಕೊನೆಗೆ ತಮಗೆ ಸಾಲ ಕೊಡದೇ ಪಂಗನಾಮ ಹಾಕಿದ ಒಬ್ಬ ಭಂಡ ಸಾಲಗಾರನಿಗೆ ರಘುರಾಮ್ ತನ್ನ ಆಕ್ರೋಶದಲ್ಲಿ ಇಟ್ಟಿದ್ದ ಅಪ್ಪಟ ದೇಶಿ ಬೈಗುಳದ ಶಾರ್ಟ್ ಫಾರ್ಮ್ ಎಂದು ತಿಳಿದಾಗ ಅವನಿಗೆ ತನ್ನ ತಲೆ ಕೆರೆದುಕೊಳ್ಳಬೇಕೋ ಅಥವಾ ಜೋರಾಗಿ ನಗಬೇಕೋ ತಿಳಿಯಲಿಲ್ಲ.
ಹಣ ತಗೊಂಡು ಮಜಾ ಮಾಡೋಕೆ ಇವನಿಗೆ ಬೆಂಗಳೂರಲ್ಲಿ ಐಷಾರಾಮಿ ಬದುಕು ಬೇಕು. ಕೇಳಿದ್ರೆ ಫೋನ್ ಸ್ವಿಚ್ ಆಫ್ ಮಾಡ್ತಾನೆ. ಇಂತಹ ಭಂಡ ಬಡ್ಡಿ ಮಗನ ಕಡೆ ನನ್ನ ಇಪ್ಪತ್ತು ಲಕ್ಷದ ಅಸಲು ಮತ್ತು ಬಡ್ಡಿಯನ್ನು  ವಸೂಲಿ ಮಾಡಿ ಜೈಲಿಗೆ ತಳ್ಳದಿದ್ದರೆ ನನ್ನ ಹೆಸರು ರಘುರಾಮ್ ಅಲ್ಲ ಎಂದು ರಘುರಾಮ್ ಆ ವ್ಯಕ್ತಿಯ ಜೇಬಿನಿಂದ ಬಲವಂತವಾಗಿ ಬ್ಲಾಂಕ್ ಚೆಕ್ ಬುಕ್ ಕಿತ್ತುಕೊಂಡು, ಸಹಿ ಹಾಕಿಸಿಕೊಳ್ಳಲು ತನ್ನ ಕಬ್ಬಿಣದ ರಾಡನ್ನು ಮೇಲಕ್ಕೆತ್ತಿದ.